ಪುತ್ತೂರು: ಸುನ್ನಿ ಸಂಘಟನೆಗಳಾದ ಎಸ್ ಕೆ ಎಸ್ ಎಸ್ ಎಫ್ ಹಾಗೂ ಗಾಳಿಮುಖ ಎಸ್ ವೈ ಎಸ್ ಜಂಟಿ ಆಶ್ರಯದಲ್ಲಿ ಉಸ್ತಾದ್ ವಲಿಯುದ್ದೀನ್ ಫೈಝಿ ನೇತೃತ್ವದಲ್ಲಿ ಬೃಹತ್ ಆಧ್ಯಾತ್ಮಿಕ ಸಂಗಮ ‘ನೂರೇ ಅಜ್ಮೀರ್’ ಮತ್ತು ಶೈಖುನಾ ಶಂಸುಲ್ ಉಲಮಾ ‘ಆಂಡ್ ನೇರ್ಚೆ’ ಕಾರ್ಯಕ್ರಮ ಮಾ.4 ರಂದು ಗಾಳಿಮುಖ ಬದ್ರ್ ಜುಮ್ಮಾ ಮಸೀದಿಯ ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆ ಎಂದು ದಾರಿಮೀಸ್ ಸೆಂಟ್ರಲ್ ಕಮಿಟಿ ಜತೆ ಕಾರ್ಯದರ್ಶಿ ಅಬ್ದುಲ್ ಕರೀಂ ದಾರಿಮಿ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಲಕ್ಷಾಂತರ ಜನರಿಗೆ ಶಾಂತಿ, ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವ ಜತೆಗೆ ಆಧ್ಯಾತ್ಮಿಕತೆಯ ಚೈತನ್ಯ ನೀಡುವ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಪ್ರಸ್ತುತ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದು, ಈ ಕಾರ್ಯಕ್ರಮವನ್ನು ಲಕ್ಷಾಂತರ ಮಂದಿ ಆನ್ ಲೈನ್ ಮೂಲಕ ವೀಕ್ಷಿಸಲಿದ್ದಾರೆ. ಸುಮಾರು 15 ಸಾವಿರಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಸಂಜೆ 4.30 ಕ್ಕೆ ಸ್ಥಳೀಯ ಜಮಾಅತ್ ಅಧ್ಯಕ್ಷ ಮಾಹಿನ್ ದಾರಿಮಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ಫಾರೂಕ್ ದಾರಿಮಿ ನೇತೃತ್ವದಲ್ಲಿ ಪುದಿಯ ವಲಪ್ಪು ಮಖಾಂ ಝಿಯಾರತ್ ಹಾಗೂ ಹಕೀಂ ತಂಙಳ್ ಆದೂರು ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಲಿದೆ. ಸಂಶುದ್ದೀನ್ ದಾರಿಮಿ ಅನುಸ್ಮರಣಾ ಭಾಷಣ ಮಾಡುವರು. ರಾತ್ರಿ 8 ರಿಂದ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ನಡೆಯಲಿದೆ. ಗಾಳಿಮುಖ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಯಾಕೂಬ್ ಸಿ.ಎಚ್. ಅಧ್ಯಕ್ಷತೆ ವಹಿಸುವರು. ಸೈಯದ್ ಝೈನುಲ್ ಅಬಿದೀನ್ ತಂಙಳ್ ಕುನ್ನುಂಗೈ ಕಾರ್ಯಕ್ರಮ ಉದ್ಘಾಟಿಸುವರು. ಶಂಸುಲ್ ಉಲಮಾ ಸ್ಮಾರಕ ದರ್ಸ್ ಮುದರಿಸ್ ಆದಂ ದಾರಿಮಿ ಮುಖ್ಯ ಭಾಷಣ ಮಾಡುವರು. ಪುತ್ತೂರು ಶಾಸಕ ಅಶೋಕ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಿಯಾಝ್ ಗಾಳಿಮುಖ, ಯಾಕೂಬ್ ಸಿ.ಎಚ್., ಹಾರಿಸ್ ಅಸ್ನವಿ ಗಾಳಿಮುಖ, ಸಹನವಾಝ್ ಗಾಳಿಮುಖ ಉಪಸ್ಥಿತರಿದ್ದರು.