ಪುತ್ತೂರು: ಮೂಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ, ದೈವಗಳ ನೇಮೋತ್ಸವ ಹಾಗೂ ನವೀಕೃತ ರಂಗ ಮಂಟಪದ ಉದ್ಘಾಟನೆ ಮಾ.1 ಹಾಗೂ 2 ರಂದು ವಿವಿಧ ವೈದಿಕ, ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯವಾಗಿ ಮುಂಡೂರು ಹಾಗೂ ಕೆದಂಬಾಡಿ ಗ್ರಾಮಕ್ಕೊಳಪಟ್ಟ ದೇವಸ್ಥಾನ ಎರಡು ವರ್ಷಗಳ ಹಿಂದೆ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಬಳಿಕದ ಜಾತ್ರೋತ್ಸವದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ದೇಣಿಗೆಗಳು ಸಂಗ್ರಹಗೊಂಡಿದೆ. ತಿಂಗಳ ಪ್ರಥಮ ಸೋಮವಾರದಂದು ವಿಶೇಷ ಪೂಜೆ ಇಲ್ಲಿ ನಡೆಯುತ್ತಲೇ ಬಂದಿದೆ. ಈಗಾಗಲೇ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಗ್ರಾಮದ ಪ್ರತೀ ಮನೆಗಳಿಗೆ ತಲುಪಿಸಲಾಗಿದೆ ಎಂದು ಅವರು ತಿಳಿಸಿದರು.
ಮಾ.1 ಶುಕ್ರವಾರ ಜಾತ್ರೋತ್ಸವದ ಅಂಗವಾಗಿ ಮಧ್ಯಾಹ್ನ 3 ಗಂಟೆಗೆ ಹಸಿರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ. 4.30 ರಿಂದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, 6.30 ಕ್ಕೆ ರಂಗಪೂಜೆ, ಪ್ರಸಾದ ವಿತರಣೆ, 7 ಕ್ಕೆ ನವೀಕೃತ ರಂಗಮಂಟಪದ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. 7.45 ಕ್ಕೆ ಸಂಗೀತ ಕಾರ್ಯಕ್ರಮ, 8.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, 8.45 ರಿಂದ ತುಳು ನಾಟಕ ಬೊಳ್ಳಿಮಲೆತ ಶಿವಶಕ್ತಿಲು ನಡೆಯಲಿದೆ ಎಂದು ತಿಳಿಸಿದರು.
ಮಾ.2 ಶನಿವಾರ ಬೆಳಿಗ್ಗೆ 8 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ಶ್ರೀ ದೈವಗಳ ಭಂಡಾರ ಇಳಿಯುವುದು, ರಾತ್ರಿ 7 ರಿಂದ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ ನಡೆದು ಬಳಿ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 10 ರಿಂದ ಕ್ಷೇತ್ರದ ದೈವಗಳಿಗೆ ನೇಮೋತ್ಸವ ಜರಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕುದ್ಕಾಡಿ ಶೀನಪ್ಪ ರೈ ಕೊಡಂಕೀರಿ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಆಳ್ವ, ಸದಸ್ಯರಾದ ವಿಶ್ವನಾಥ ರೈ ಕುಕ್ಕುಂಜೋಡು, ಭಾಸ್ಕರ ರೈ ಕೆದಂಬಾಡಿಗುತ್ತು ಉಪಸ್ಥಿತರಿದ್ದರು.