ಪುತ್ತೂರು: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಹಾಗೂ ಗುರುವಂದನೆ, ತುಲಾಭಾರ ಸಮಾರಂಭ ವೈಭವದಿಂದ ಜರಗಿತು.
ರವಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಯತಿವರೇಣ್ಯರ ಉಪಸ್ಥಿತಿಯಲ್ಲಿ ನಡೆದ ಸಮಾರಂಭಕ್ಕೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾದರು. ರಾಜಕೀಯ ನಾಯಕರ ಸಹಿತ, ಅನೇಕ ಗಣ್ಯರು ಆಗಮಿಸಿ ಗುರುಗಳ ಆಶೀರ್ವಾದ ಸ್ವೀಕರಿಸಿದರು.
ಬೆಳಿಗ್ಗೆ ಪೆರಿಯಡ್ಕದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ದರ್ಬೆಯಿಂದ ಭವ್ಯ ಶೋಭಾಯಾತ್ರೆ ನಡೆಯಿತು. ಶ್ರೀಗಳ ಉಪಸ್ಥಿತಿಯಲ್ಲಿ ಗಣ್ಯರು ಚೆಂಡೆ, ಕೊಂಬಿನ ಸದ್ದಿನೊಂದಿಗೆ ಮೆರವಣಿಗೆ ಸಾಗಿಬಂದಿತು. ರಾಜ್ಯದ ವಿವಿಧೆಡೆಯ ಟ್ಯಾಬ್ಲೋಗಳು ಶೋಭಾಯಾತ್ರೆಗೆ ಶೋಭೆ ನೀಡಿತು. ನಂತರ ಕೊಂಬೆಟ್ಟು ಮಹಾಲಿಂಗೇಶ್ವರ ಐಟಿಐನಲ್ಲಿ ಸಭಾಭವನ ಕಟ್ಟಡ ಉದ್ಘಾಟಿಸಿ, ದೇವರಮಾರು ಗದ್ದೆಯ ಭವ್ಯ ಸಭಾಂಗಣದಲ್ಲಿ ಸಮಾರಂಭ ಆರಂಭಗೊಂಡಿತು.
ರಜತ ತುಲಾಭಾರದ ನಂತರ ಗುರುವಂದನೆ ಸ್ವೀಕರಿಸಿದ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ವಿವಿಧ ಶಾಖಾ ಮಠದ ಸ್ವಾಮೀಜಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜ ಬರೆದ ‘ಸಂಸ್ಕೃತಿ – ಸಂಸ್ಕೃತಕ್ಕೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ’ ಪ್ರೌಢಪ್ರಬಂಧದ ಗ್ರಂಥವನ್ನು ಅನಾವರಣಗೊಳಿಸಲಾಯಿತು.
ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಡಾ. ಅಶ್ವತ್ಥ್ ನಾರಾಯಣ್, ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಂ.ಎಲ್.ಸಿ. ಎಸ್.ಎಲ್. ಭೋಜೇಗೌಡ ಮೊದಲಾದವರು ಉಪಸ್ಥಿತರಿದ್ದರು. ಹರಿಪ್ರಸಾದ್ ಅಡ್ಪಂಗಾಯ ಹಾಗೂ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.