ಪುತ್ತೂರು: ಪರ್ಲಡ್ಕ ಎಸ್ ಡಿ ಪಿ ರೆಮಿಡೀಸ್ ರಿಸರ್ಚ್ ಸೆಂಟರ್ ನ ಆವರಣದಲ್ಲಿ ಮೂರು ದಿನಗಳ ಕಾಲ ಸಂಭ್ರಮಿಸಿದ 20ನೇ ವರ್ಷದ ಎಸ್ ಡಿ ಪಿ ಕಲೋಪಾಸನಾ- 2024 ಸಾಂಸ್ಕೃತಿಕ ಕಲಾ ಸಂಭ್ರಮ ಹನುಮಗಿರಿ ಮೇಳದವರಿಂದ ಇಂದ್ರಪ್ರಸ್ಥ ಯಕ್ಷಗಾನ ಪ್ರದರ್ಶನದ ಮೂಲಕ ಸಂಪನ್ನಗೊಂಡಿತು.
ಕೊನೆಯ ದಿನದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಆರ್ ಎಸ್ ಎಸ್ ಹಿರಿಯ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಕೇವಲ ಪ್ರದರ್ಶನಕ್ಕಾಗಿ ಕಲೆ ಇರುವುದಲ್ಲ. ಅದರ ಉಪಾಸನೆಯಾಗಬೇಕು. ಕಲೆಯ ಉಪಾಸನೆಯ ಕೆಲಸವನ್ನು ಹಲವು ವರ್ಷಗಳಿಂದ ಎಸ್ ಡಿ ಪಿ ಸಂಸ್ಥೆಯ ಡಾ. ಹರಿಕೃಷ್ಣ ಪಾಣಾಜೆ ಕುಟುಂಬಸ್ಥರು ‘ಕಲೋಪಾಸನಾ’ ಕಾರ್ಯಕ್ರಮದ ಮೂಲಕ ನಡೆಸುತ್ತಿದ್ದಾರೆ. ಕಲೆಯ ಬಗೆಗಿನ ಹೊಸದೃಷ್ಠಿ ಜೀವನ ಮೌಲ್ಯಗಳನ್ನು ಮತ್ತೆ ನೆನಪಿಸಲು ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಸಮಾಜಮುಖಿ ಕಾರ್ಯಕ್ರಮ ನೀಡುವ ಮಾನಸಿಕತೆಯುಳ್ಳ ಎಸ್ ಡಿ ಪಿ ಸಂಸ್ಥೆಯ ಮೂಲಕ ಇನ್ನಷ್ಟು ಸಮಾಜಮುಖಿ ಕೆಲಸ ನಡೆಯಲಿ ಎಂದರು.
ಸಂಸ್ಥೆಯ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ, ರೂಪಲೇಖ ಸುಜಾತ, ಡಾ. ಮೇಘನಾ ಪಾಣಾಜೆ, ಡಾ. ಕೇದಾರಕೃಷ್ಣ ಪಾಣಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀಶ ಕುಮಾರ್ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಸಂಭ್ರಮದ ಅಂಗವಾಗಿ ಎರಡನೇ ದಿನವಾದ ಭಾನುವಾರ ಭರತಾಂಜಲಿ ನೃತ್ಯ ಸಂಸ್ಥೆ ವತಿಯಿಂದ ಅನಿತಾ ಗುಹಾ ಚೆನ್ನೈ ಅವರಿಂದ ಭರತನಾಟ್ಯ ‘ಹರೇ ರಾಮ ಹರೇ ಕೃಷ್ಣಾ’ ಭರತ ನೃತ್ಯಗಾಥಾ ಪ್ರಸ್ತುತಿಗೊಂಡಿತು. ಸೋಮವಾರ ಹನುಮಗಿರಿ ಮೇಳದವರಿಂದ ‘ಇಂದ್ರಪ್ರಸ್ಥ’ ಯಕ್ಷಗಾನ ಪ್ರದರ್ಶನಗೊಂಡಿತು. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.