ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ನವತಿ ಸಂಭ್ರಮಾಚರಣೆ | ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರಿಗೆ ಸೇವಾರತ್ನ ಬಿರುದಿನೊಂದಿಗೆ ಗೌರವಾರ್ಪಣೆ

ಪುತ್ತೂರು: ಪರಿಪೂರ್ಣ ಜೀವನವನ್ನು ಮೌಲ್ಯಾಧಾರಿತವಾಗಿ ಸಮಾಜದಲ್ಲಿನ ಹಲವಾರು ಸಂಕಷ್ಟಗಳ ನಡುವೆ ನಡೆಸುವುದು ಸುಲಭದ ಕೆಲಸವಲ್ಲ. ಆದರೆ ಅಜಾತಶತ್ರು ಚಿಕ್ಕಪ್ಪ ನಾಯ್ಕ್ ರವರು ಇದಕ್ಕೆ ಹೊರತು ಎಂಬಂತೆ ತನ್ನ ಜೀವನದಲ್ಲಿ ಒಂದು ಸಿದ್ಧಾಂತ ಇಟ್ಟುಕೊಂಡು, ಸಮುದಾಯದ ಬಗ್ಗೆ ಚಿಂತನೆ ಇಟ್ಟುಕೊಂಡು ಬದುಕು ಸಾಗಿಸಿದವರು ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದರು.

ಅವರು ಶನಿವಾರ ಕೊಂಬೆಟ್ಟು ಸುಂದರ ರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಸಂಭ್ರಮಾಚರಣೆ ಸಮಿತಿ ವತಿಯಿಂದ ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರವರ ನವತಿ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತನಗೆ ಒಲಿದು ಬಂದ ಕೃಷಿ ಜಮೀನಿನಲ್ಲಿ ಕೃಷಿ ಮಾಡುತ್ತಾ ಬಂದ ಆದಾಯದಲ್ಲಿ ಕೇವಲ ಬಂಟ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಇತರ ಸಮುದಾಯಕ್ಕೂ ದಾನ, ಧರ್ಮಗಳನ್ನು ಮಾಡುತ್ತಾ ಇತರ ಸಮುದಾಯದವರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದ ಅವರು, ಯಾವುದೇ ಅನಗತ್ಯ ಚರ್ಚೆಗಳನ್ನು ಮಾಡದೆ ಪಾರದರ್ಶಕ ಜೀವನದೊಂದಿಗೆ ಸಮಾಜದಲ್ಲಿ ವಿಶೇಷ ಗೌರವ ಪಡೆದವರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ನವತಿ ಸಂಭ್ರಮದ ನೆನಪಿಗಾಗಿ ಚಿಕ್ಕಪ್ಪ ನಾಯ್ಕ್ ರವರಿಗೆ ಸಮಾಜ ಸೇವಾರತ್ನ ಬಿರುದಿನೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.





























 
 

 ಮುಖ್ಯ ಅತಿಥಿಯಾಗಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸಾಮಾಜಿಕ, ಸಾಂಸ್ಕೃತಿಕವಾಗಿಯೂ ಸಮುದಾಯವನ್ನು ಕಟ್ಟಿ ಬೆಳೆಸುವಲ್ಲಿ ಅವರ ಪ್ರಯತ್ನ ಅಪಾರ. ಬಂಟ ಸಮುದಾಯ ಎಲ್ಲಾ ಸಮಾಜದೊಂದಿಗೆ ಜತೆಯಾಗಿ ಹೋಗುವ ಸಮಾಜವಾಗಿದ್ದು, ಇಂತಹ ಬಂಟ ಸಮುದಾಯದ ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರು ಸಮಾಜದ ಬೆನ್ನೆಲುಬಾಗಿದ್ದಾರೆ. ಅವರ ನವತಿ ಸಂಭ್ರಮಾಚರಣೆ ಅರ್ಥಪೂರ್ಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿ ಗೌರವಾಧ್ಯಕ್ಷ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಮಾತನಾಡಿ, ಹಿರಿಯರ ಜತೆ ಕಿರಿಯರಿಗೂ ಗೌರವ ನೀಡುವ ವ್ಯಕ್ತಿತ್ವ ಹೊಂದಿರುವ, ಮಿತಭಾಷಿ ಚಿಕ್ಕಪ್ಪ ನಾಯ್ಕ್ ರನ್ನು ಗೌರವಿಸಿದರೆ ನಮ್ಮನ್ನು ನಾವು ಗೌರವಿಸಿಕೊಂಡ ಹಾಗೆ ಎಂದು ಹೇಳಿದರು.

ನವತಿ ಸಂಭ್ರಮಾಚರಣೆ ಸಮಿತಿ ಕೋಶಾಧಿಕಾರಿ ನೋಣಾಲು ಜೈರಾಜ್ ಭಂಡಾರಿ ಸನ್ಮಾನ ಪತ್ರ ವಾಚಿಸಿದರು. ಯಕ್ಷ ಪಟ್ಲ ಪೌಂಡೇಶನ್ ಸ್ಥಾಪಕ ಸತೀಶ್ ಶೆಟ್ಟಿ ಪಟ್ಲ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಸಂಭ್ರಮಾಚರಣೆ ಸಮಿತಿ ಕಾರ್ಯದರ್ಶಿ ಜಗಜೀವನ್ ದಾಸ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಯಮಿ ಬೊಳ್ಳಾಡಿ ವೆಂಕಪ್ಪ ಗೌಡ, ಮುಗೇರು ಗೋಪಾಲ್ ರಾವ್, ರಾಜೀವ ರೈ ಕುತ್ಯಾಡಿ, ಡಾ.ಅಶೋಕ್ ಪಡಿವಾಳ್, ಕಾವು ಹೇಮನಾಥ ಶೆಟ್ಟಿ, ಜಯಪ್ರಕಾಶ್ ರೈ, ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಗುರು ಶ್ರೀಧರ್ ರೈ ಹೊಸಮನೆ,ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು .ನವತಿ ಸಂಭ್ರಮಾಚರಣ ಸಮಿತಿ ಅಧ್ಯಕ್ಷ ಶಶಿಕುಮಾ‌ರ್ ರೈ ಬಾಲ್ಗೊಟ್ಟು ಸ್ವಾಗತಿಸಿದರು. ವಿಶ್ರಾಂತ ಪ್ರೊ. ದತ್ತಾತ್ರೆಯ ರಾವ್ ಪ್ರಾರ್ಥಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

ನವತಿ ಸಂಭ್ರಮದ ಆರಂಭದಲ್ಲಿ ಪಾವಂಜೆ ಮೇಳದ ಮುಖ್ಯ ಭಾಗವತರಾಗಿರುವ ಮತ್ತು ಯಕ್ಷದ್ರುವ ಪಟ್ಲ ಪೌಂಡೇಶನ್ ನ ಪಟ್ಲ ಸತೀಶ್ ಶೆಟ್ಟಿ ಬಳಗದಿಂದ ಯಕ್ಷಗಾನ ಗಾನ ವೈಭವ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top