ಪುತ್ತೂರು: ಸ್ವಾಮಿ ವಿವೇಕಾನಂದರು ಭಾರತದ ಯುವ ಶಕ್ತಿಗೆ ಪ್ರೇರಣೆ ಮತ್ತು ಪ್ರತೀಕ. ಈ ಮೂಲಕ ಯುವ ಭಾರತವನ್ನು ಜಗತ್ತಿಗೆ ಪರಿಚಯಿಸಿದರು. ಸ್ವಾಮಿ ವಿವೇಕಾನಂದರು ಜಗತ್ತಿನ ಎಲ್ಲ ಯುವ ಸಮುದಾಯದ ಪ್ರೇರಕ ಶಕ್ತಿ. ಅವರ ವಿಚಾರದಾರೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಅವರ ಜಯಂತಿಗೆ ಸಾರ್ಥಕತೆ ತರಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿಜ್ಞಾನ ನಿಕಾಯದ ಡೀನ್ ಡಾ. ಬಿ ಎ ಕುಮಾರಹೆಗ್ಡೆ ಕರೆ ನೀಡಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಘಟಕದ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಅಂಗವಾಗಿ ನಡೆದ ವಿವೇಕ ಸಪ್ತಾಹ-2023ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಯುವ ಸಮುದಾಯ ವಿವೇಕಾನಂದರ ವಾಣಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಉನ್ನತ ವಿದ್ಯಾಭ್ಯಾಸದ ಗುರಿ ಹೊಂದುವ ಮೂಲಕ ದೇಶದ ಕೀರ್ತಿಯನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಬೇಕು. ಆಗ ಮಾತ್ರ ಸ್ವಾಮಿ ವಿವೇಕಾನಂದರ ಆದರ್ಶಕ್ಕೆ ಅರ್ಥ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸುರೇಂದ್ರ ಕಿಣಿ ಜಿ. ಮಾತನಾಡಿ, ದೇಶದ ಯುವಕರಿಗೆ ಸ್ಪೂರ್ತಿಯ ಚಿಲುಮೆಯಂತಿದ್ದ ಸ್ವಾಮಿ ವಿವೇಕಾನಂದರನ್ನು ಸ್ಮರಿಸಲು, ದೇಶದ ಯುವಕರು ಉತ್ತಮ ವ್ಯಕ್ತಿಯಾಗಲು ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಜ.12ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ವಿವೇಕಾನಂದರನ್ನು ಒಂದು ದಿನಕ್ಕೆ ಮಾತ್ರ ಸ್ಮರಿಸದೇ ಅವರ ಎಲ್ಲಾ ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ. ಬಿ.ಕೆ. ರವೀಂದ್ರ ಮಾತನಾಡಿ, ಭಾರತದ ಪರಂಪರೆಯನ್ನು, ಸಂಸ್ಕೃತಿಯನ್ನು 127 ವರ್ಷಗಳ ಹಿಂದೆಯೇ ವಿಶ್ವಕ್ಕೆ ಪರಿಚಯ ಮಾಡಿದ ವಿವೇಕಾನಂದರು ಭಾರತೀಯ ಸಮಾಜಕ್ಕೆ ಇಂದಿಗೂ ದಾರಿ ದೀಪವೇ ಆಗಿದ್ದಾರೆ. ಅವರ ತತ್ವಗಳು, ಚಿಂತನೆಗಳ ಅಡಿಯಲ್ಲಿಯೇ ಇಂದು ಭಾರತ ಸಾಗುತ್ತಿದೆ ಎಂದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಪ್ರಾಸ್ತವಿಕವಾಗಿ ಮಾತನಾಡಿದರು. ಇದೇ ವೇಳೆ ಎನ್ ಎಸ್ ಎಸ್ ಘಟಕದಿಂದ ಹೊರ ತರುತ್ತಿರುವ ಸೇವಾಬಿಂಬ ಭಿತ್ತಿಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ, ಎನ್ ಎಸ್ ಎಸ್ ಸಹ ಸಂಯೋಜಕಿ ಶ್ರೀರಕ್ಷಾ ಉಪಸ್ಥಿತರಿದ್ದರು. ಎನ್ ಎಸ್ ಎಸ್ ವಿದ್ಯಾರ್ಥಿ ಸಂಯೋಜಕ ಕೌಶಿಕ್ ಜೆ. ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಪರಿಷತ್ ನಾಯಕ ಅಭಿಷೇಕ್ ಲಾಲ್ ವಂದಿಸಿದರು. ವಿದ್ಯಾರ್ಥಿಗಳಾದ ಶ್ರದ್ದಾ ಪಂಡಿತ್ ಹಾಗೂ ವರ್ಷಾ ಕಾರ್ಯಕ್ರಮ ನಿರೂಪಿಸಿದರು.