ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರು ಅವಬೃತ ಸ್ನಾನಕ್ಕೆ ತೆರಳುವ ವೀರಮಂಗಲ ಕುಮಾರಧಾರ ನದಿಯಲ್ಲಿ ಅವ್ಯಾಹತವಾಗಿ ಮರಳು ತೆಗೆದು ರಾಶಿ ಹಾಕಲಾಗಿದ್ದು, ಇದೀಗ ಸ್ಥಳೀಯ ಜನರ ವಿರೋಧಕ್ಕೆ ಕಾರಣವಾಗಿದೆ.
ಶ್ರೀ ಮಹಾಲಿಂಗೇಶ್ವರ ದೇವರು ಜಳಕ ಮಾಡುವ ಸ್ಥಳದಿಂದಲೇ ಮರಳುಗಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ನದಿಯ ಎರಡೂ ಬದಿಗಳಲ್ಲಿ ಲೋಡುಗಟ್ಟಲೆ ಮರಳು ರಾಶಿ ಹಾಕಲಾಗಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮರಳು ರಾಶಿ ಹಾಕಿದರೂ ಸಂಬಂಧ ಪಟ್ಟ ಅಧಿಕಾರಿಗಳು ಇನ್ನೂ ಗಮನಹರಿಸದಿರುವುದು ದುರಾದೃಷ್ಟ.
ಈ ಕುರಿತು ಭೂವಿಜ್ಞಾನ ಮತ್ತು ಗಣಿ ಇಲಾಖೆಯ ಭೂವಿಜ್ಞಾನಿ ಡಾ.ಮಾದೇಶ್ವರ ಎಚ್. ಅವರನ್ನು ಸಂಪರ್ಕಿಸಿದಾಗ, ಸ್ಪಷ್ಟ ಉತ್ತರ ನೀಡದೆ ಜಾರಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಅರಣ್ಯ ಇಲಾಖೆ, ಲೋಕೋಪಯೋಗಿ, ಗಣಿ ಇಲಾಖೆ ಸೇರಿದಂತೆ ಕೆಲವೊಂದು ಸ್ಥಳಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಪರವಾನಿಗೆ ಇದ್ದು ಮರಳು ತೆಗೆದು ರಾಶಿ ಹಾಕಿದ್ದಾರೋ ಎಂಬುದು ಯಾರಿಗೂ ತಿಳಿದಿಲ್ಲ.
ಈ ರೀತಿ ದೊಡ್ಡ ಮಟ್ಟದಲ್ಲಿ ಮರಳು ತೆಗೆದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.