ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಇನ್ನುಮುಂದೆ ಕಡ್ಡಾಯವಲ್ಲ. ಹೀಗೊಂದು ಸುತ್ತೋಲೆಯನ್ನು ರಾಜ್ಯ ಸರಕಾರ ಫೆ.16 ರಂದು ಹೊರಡಿಸಿದೆ. ಈ ನಡುವೆ ರಾಜ್ಯ ಸರಕಾರದ ವಿರುದ್ಧ ವಿರೋಧಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ.
ರಾಜ್ಯ ಸರಕಾರ ಹೊರಡಿಸಿದ ಸುತ್ತೋಲೆಯಲ್ಲಿ ರಾಷ್ಟ್ರ ಕವಿ, ಜ್ಞಾನಪೀಠ ಪುರಸ್ಕೃತ ಡಾ. ಕುವೆಂಪುರವರ ‘ಜಯ ಭಾರತ ಜನನಿಯ ತನುಜಾತೆ’ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರಕಾರದ ಆದೇಶ ಹಾಗೂ ಅದಕ್ಕೆ ಫೆಬ್ರವರಿ 1 ರಂದು ಮಾಡಲಾದ ತಿದ್ದುಪಡಿ ಪ್ರಕಾರ, ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದರ ಬದಲಾಗಿ, ‘ಸರಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂಬುದಾಗಿ ಉಲ್ಲೇಖಿಸಲಾಗಿದೆ.
ಈ ಕುರಿತು ಶಿಕ್ಷಣ ಸಚಿವ ಮಧುಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಶಾಲೆಯಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ ಮಾಡುತ್ತೇವೆ. ಕನ್ನಡ ಸಂಸ್ಕೃತಿ ಇಲಾಖೆ ಯಾಕೇ ಈ ನಿರ್ಧಾರ ತಗೆದುಕೊಂಡಿದೆ ಎಂಬುದಕ್ಕೆ ಅವರು ಉತ್ತರ ಕೊಡಬೇಕಾಗುತ್ತೆ ಎಂದು ಹೇಳಿದರು. ಶಾಲೆಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹೇಳಿದರೆ ಒಳ್ಳೆಯದು, ಕುವೆಂಪು ಅವರಿಗೆ ಜಾತ್ಯತೀತವಾಗಿ, ಪಕ್ಷಾತೀತವಾಗಿ ಒಂದು ಭಾವನಾತ್ಮಕ ಸಂಬಂಧವಿದೆ ಹಾಗಾಗಿ ನಾಡಗೀತೆ ಇದ್ರೆ ಒಳ್ಳೆಯದು ಎಂದ ಅವರು ನಾಡಗೀತೆ ಕಡ್ಡಾಯವಲ್ಲ ಎಂದು ಮಾಡಿದ್ದರೆ ನಾನು ಮಾರ್ಪಾಡು ಮಾಡಿಸುತ್ತೇನೆ. ಯಾವುದಾದರೂ ಕಾರಣದಿಂದ ಹೀಗೆ ಮಾಡಿರುತ್ತಾರೆ. ನಾನು ನಮ್ಮ ಇಲಾಖೆಯಲ್ಲಿ ನಾಡಗೀತೆ ಕಡ್ಡಾಯ ಅಂತ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.
ಖಾಸಗಿ ಶಾಲೆಗಳಿಗೆ ನಾಡಗೀತೆ ವಿನಾಯ್ತಿ ಆದೇಶ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ. ಪ್ರಿಂಟ್ ತಪ್ಪಿನಿಂದಾಗಿ ಹೀಗಾಗಿದೆ ಎಂದು ಅವರು ಸ್ಪಷ್ಟಿಕರಣ ನೀಡಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ. ನಮಗೆ ಎಲ್ಲಾ ಶಾಲೆಗಳು ಒಂದೇ. ಆದೇಶ ಮಾಡಬೇಕಾದರೆ ಸರಕಾರಿ ಶಾಲೆ, ಅನುದಾನಿತ ಶಾಲೆ ಎಂದು ಹಾಕಿದ್ದಾರೆ. ಅದನ್ನು ಬದಲಾವಣೆ ಮಾಡಿ ಎಲ್ಲಾ ಶಾಲೆಗಳು ಎಂದು ಮತ್ತೆ ಸುತ್ತೋಲೆ ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.