ಪುತ್ತೂರು: ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ 90 ರ ಸಂಭ್ರಮಾಚರಣಾ ಸಮಿತಿ ವತಿಯಿಂದ ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರ 90 ರ ಸಂಭ್ರಮ ’90 ರ ನವತಿ’ ಸಂಭ್ರಮ ಫೆ.24 ಶನಿವಾರ ಕೊಂಬೆಟ್ಟು ಎಂ.ಸುದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅರಿಯಡ್ಕ ಚಿಕ್ಕಪ್ಪ ನಾಯ್ಕರು ಅತ್ಯುತ್ತಮ ಕೃಷಿಕರಾಗಿ, ಧಾರ್ಮಿಕ, ಸಾಮಾಜಿಕ, ಕಲಾಕ್ಷೇತ್ರದಲ್ಲಿ ಕಾಣಿಸಿಕೊಂಡಿರುವುದಲ್ಲದೆ, ಅವರದು ಮೃದು, ಮಧುರ ಭಾವದ ಬದುಕು. ಸಮಾಜದಲ್ಲಿ ಜಾತಿ-ಮತ-ಭೇದ ಮರೆತು ಎಲ್ಲರೊಂದಿಗೆ ಒಟ್ಟಾಗಿ ನಡೆಯತಕ್ಕ ವ್ಯಕ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಅವರ 90ರ ಸಂಭ್ರಮ ಆಚರಣೆ ಮಾಡುವುದು ಅರ್ಥಪೂರ್ಣ ಎಂದು ತಿಳಿಸಿದರು.
ಸಂಭ್ರಮಾಚರಣೆ ಅಂಗವಾಗಿ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಶನಿವಾರ ಬೆಳಿಗ್ಗೆ 11.30 ರಿಂದ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ವಹಿಸಲಿದ್ದು, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವ ಮೂಡಬಿದ್ರೆ ಸನ್ಮಾನಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ಚಿಕ್ಕಪ್ಪ ನಾಯ್ಕರ ಕುರಿತು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಕೆ.ಆರ್.ಲೋಬೋ, ಪುತ್ತೂರು ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30 ರಿಂದ ಖ್ಯಾತ ಭಾಗವತ ಸತೀಶ್ ಶೆಟ್ಟಿ ಪಟ್ಲ ತಂಡದಿಂದ ‘ಗಾನ ವೈಭವ’ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಕಾರ್ಯದರ್ಶಿ ಜಗಜೀವನ್ ದಾಸ್ ರೈ ಉಪಸ್ಥಿತರಿದ್ದರು.