ಪುತ್ತೂರು: ಪುತ್ತೂರು ತಾಲೂಕಿನ ಕೊಯಿಲ ಪಶು ಸಂವರ್ಧನ ತರಬೇತಿ ಕೇಂದ್ರ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ ನೀಡಬೇಕು. ಭದ್ರತೆ ಇಲ್ಲದ ವ್ಯವಸ್ಥೆಯಲ್ಲಿ ದುಡಿಯುವ ಈ ಕಾರ್ಮಿಕರಿಗೆ ಯಾವುದೇ ಸವಲತ್ತುಗಳಿಲ್ಲ. ಕೇಂದ್ರ ಸರ್ಕಾರ ಈ ಗುತ್ತಿಗೆ ಆಧಾರಿತ ಕಾರ್ಮಿಕ ಪದ್ದತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ಸಿಐಟಿಯು ವತಿಯಿಂದ ಶುಕ್ರವಾರ ಪುತ್ತೂರು ಸಹಾಯಕ ಆಯುಕ್ತರ ಮೂಲಕ ಮನವಿ ನೀಡಲಾಯಿತು.
ಇದರ ಜತೆಗೆ ಕಾರ್ಮಿಕರಿಗೆ ಮಾಸಿಕ ವೇತನ ರೂ.31 ಸಾವಿರ ನೀಡಬೇಕು. ಕಾನೂನುಬದ್ಧ ಸವಲತ್ತು ಮತ್ತು ಸೇವಾಭದ್ರತೆ ನೀಡಬೇಕು. ಗುತ್ತಿಗೆ ಕಾರ್ಮಿಕ ಕಾಯ್ದೆಯಡಿ ಸಿಗಬೇಕಾದ ವೇತನ ಚೀಟಿ, ಉದ್ಯೋಗ ಚೀಟಿ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹಲವು ವರ್ಷಗಳಿಂದ ದುಡಿಯುತ್ತಿರುವ ಈ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತ ವರ್ಗಕ್ಕೆ ತೆರಿಗೆ ಏರಿಸಿ ಬಡವರಿಗೆ ಬದುಕಲು ಅವಕಾಶ ನೀಡಬೇಕು. ರಾಜ್ಯದಲ್ಲಿ ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸುವ ಕಾಯ್ದೆ ತಿದ್ದುಪಡಿ ಕೈಬಿಡಬೇಕು. ಮಹಿಳೆಯರನ್ನು ರಾತ್ರಿ ದುಡಿಸುವ ತಿದ್ದುಪಡಿ ವಾಪಾಸು ಪಡೆಯಬೇಕು. ಕೃಷಿ ವಿರೋಧಿ ಕೃಷಿನೀತಿ ವಾಪಾಸು ಪಡೆಯಬೇಕು. ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತರಿ ಪಡಿಸಬೇಕು. ಕೃಷಿಗೆ ಸಬ್ಸಿಡಿ ಕಡಿತ ನೀತಿ ಕೈಬಿಡಬೇಕು. ವಿದ್ಯುತ್ ಸೇರಿದಂತೆ ಸಾರ್ವಜನಿಕ ವಲಯಗಳ ಖಾಸಗೀಕರಣ ನಿಲ್ಲಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ರಚಿಸಲಾದ ಸಾಮಾಜಿಕ ಭದ್ರತಾ ಮಂಡಳಿ ಬಲಪಡಿಸಬೇಕು. ಕೇಂದ್ರ ಸರ್ಕಾರ ತನ್ನ ವಾರ್ಷಿಕ ನಿವ್ವಳ ಆದಾಯದಲ್ಲಿ ರೂ. 3ಲಕ್ಷ ಕೋಟಿ ಹಣವನ್ನು ಅಸಂಘಟಿತ ಕಾರ್ಮಿಕರ ಕಾರ್ಯಕ್ರಮಗಳಿಗೆ ಘೋಷಣೆ ಮಾಡಬೇಕು. ಕಾರ್ಮಿಕರ ಕೆಲಸದ ಅವಧಿಯನ್ನು ವಾರಕ್ಕೆ 36 ಗಂಟೆಗಳು ಹಾಗೂ ದಿನದ ಪಾಳಿಯನ್ನು 9 ಗಂಟೆಗೆ ಮಿತಿಗೊಳಿಸಬೇಕು ಮುಂತಾದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಈ ಮನವಿಯಲ್ಲಿ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ರೈತ-ಕಾರ್ಮಿಕ ಮುಖಂಡ, ನ್ಯಾಯವಾದಿ ಬಿ. ಎಂ. ಭಟ್, ಕಾರ್ಮಿಕ ಮುಖಂಡ ನ್ಯಾಯವಾದಿ ಪಿ. ಕೆ. ಸತೀಶನ್, ಕಾರ್ಮಿಕ ಮುಂದಾಳು ಈಶ್ವರಿ, ಪಶುಸಂವರ್ಧನಾ ತರಬೇತಿ ಕೇಂದ್ರದ ನೌಕರರ ಸಂಘದ ಅಧ್ಯಕ್ಷ ದಯಾನಂದ, ಕಾರ್ಯದರ್ಶಿ ಸಂತೋಷ್, ಜತೆ ಕಾರ್ಯದರ್ಶಿ ಲಲಿತಾ ಮತ್ತಿತರರು ಇದ್ದರು