ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ

ಪರೀಕ್ಷೆ ಒಂದು ಸಮಸ್ಯೆ ಅಲ್ಲ, ಅದೊಂದು ಅವಕಾಶ

ನನಗೆ ಒಂದು ಬಹು ದೊಡ್ಡ ಕನಸಿದೆ. ಮಕ್ಕಳು ಪರೀಕ್ಷೆಗೆ ಹೋಗುವಾಗ ಜಾತ್ರೆಗೆ, ಸಾಂತ್‌ಮಾರಿಗೆ, ಉತ್ಸವಕ್ಕೆ ಹೋಗುವಷ್ಟೆ ಖುಷಿಯಿಂದ ಹೋಗಬೇಕು ಎಂದು. ಆದರೆ ಇಂದು ಹಾಗಾಗುತ್ತಿಲ್ಲ. ಪರೀಕ್ಷೆ ಒಂದು ಯುದ್ಧ ಎಂದು ನಾವೆಲ್ಲರೂ ಅವರ ತಲೆಗೆ ತುರುಕುತ್ತಿದ್ದೇವೆ. ಪರಿಣಾಮವಾಗಿ ಪರೀಕ್ಷೆ ಮುಗಿಯುವತನಕ ಮನೆಗಳಲ್ಲಿ ಅಘೋಷಿತವಾದ ಕರ್ಫ್ಯೂ ಘೋಷಣೆ ಆಗಿರುತ್ತದೆ. ಈ ಹೊತ್ತಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೂ ಕಣ್ಣು ಕೆಂಪು ಮಾಡಿ ಸ್ವಾಗತ ಮಾಡುವ ಪರಿಸ್ಥಿತಿ ಇಂದು ಇದೆ. ಮಕ್ಕಳ ಮೇಲೆ ಒತ್ತಡ ಹಾಕಿದರೆ ಮಾತ್ರ ಫಲಿತಾಂಶ ಬರುತ್ತದೆ ಎಂಬುದು ಕೆಲವು ಶಿಕ್ಷಕರ, ಪೋಷಕರ ಗಟ್ಟಿ ನಂಬಿಕೆ ಆಗಿಬಿಟ್ಟಿದೆ.

ಮಕ್ಕಳಲ್ಲಿ ಸಹಜವಾದ ಒತ್ತಡವು ಇರುವುದಿಲ್ಲ



































 
 

ಪರೀಕ್ಷೆ, ಸ್ಪರ್ಧೆಗಳ ಬಗ್ಗೆ ಮಕ್ಕಳಲ್ಲಿ ಸಹಜವಾದ ಒತ್ತಡ ಇರುವುದಿಲ್ಲ. ಆ ಒತ್ತಡವನ್ನು ತುಂಬಿಸುವವರು ನಾವೇ. ಪೋಷಕರಿಗೆ ತಮ್ಮ ಮಗು ಮಾರ್ಕ್ಸ್ ಪಡೆದು ಜಗತ್ತನ್ನು ಗೆಲ್ಲಬೇಕು ಎನ್ನುವ ಮೈಂಡ್‌ಸೆಟ್. ಮಾರ್ಕ್ ಇಲ್ಲದಿದ್ದರೆ ಬದುಕುವುದೇ ಕಷ್ಟ ಎಂದು ಅವರು ದಿನವೂ ಮಕ್ಕಳಿಗೆ ಹೇಳುತ್ತಾ ಇರುತ್ತಾರೆ. ಇನ್ನು ಅಧ್ಯಾಪಕರು ತಮ್ಮ ಶಾಲೆಯ ಗೌರವ, ಪ್ರತಿಷ್ಠೆ ಇವೆಲ್ಲವನ್ನೂ ಆ ಮಕ್ಕಳ ಮಾರ್ಕ್ಸ್ ಜತೆಗೆ ಸಮೀಕರಣ ಮಾಡುತ್ತಾ ಹೋಗುತ್ತಾರೆ. ಅವರಿಗೂ ಇಲಾಖೆ, ಆಡಳಿತ ಮಂಡಳಿಗಳ ಒತ್ತಡ ಇರುತ್ತದೆ. ಆಂಗ್ಲ ಮಾಧ್ಯಮ ಶಾಲೆಗಳಿಗೆ ತಮ್ಮ ಮುಂದಿನ ವರ್ಷದ ಫ್ಲೆಕ್ಸ್‌ಗೆ ಮತ್ತು ಜಾಹೀರಾತಿಗೆ ಹಾಕಲು ರ್ಯಾಂಕ್‌ ವಿಜೇತ ಮಕ್ಕಳ ಫೋಟೊಗಳು ಬೇಕು. ಫ್ಲೆಕ್ಸ್ ಹಾಕದಿದ್ದರೆ ಮಕ್ಕಳು ಬರುವುದಿಲ್ಲ. ಈ ಎಲ್ಲ ಒತ್ತಡಗಳು ವರ್ಗಾವಣೆ ಆಗುವುದು ಖಂಡಿತ ನಮ್ಮ ಮಕ್ಕಳಿಗೇ. ಇದರಿಂದಾಗಿ ನಮ್ಮ ಮಕ್ಕಳು ಕಂಬಳದ ಕೋಣಗಳ ಹಾಗೆ ರೇಸಿಗೆ ನಿಲ್ಲಬೇಕಾದ ಅನಿವಾರ್ಯತೆ ಇದೆ. ಅದುವರೆಗೆ ಗೆಳೆತನದಲ್ಲಿ ಬೆಳೆದ ಮಕ್ಕಳು ಪರೀಕ್ಷೆ ಹತ್ತಿರ ಬಂದ ಹಾಗೆ ಸ್ಪರ್ಧಿಗಳೇ ಆಗಿಬಿಡುತ್ತಾರೆ.
ಮಗುವನ್ನು ಒಂದು ಪರೀಕ್ಷೆಯು ಮೂಲಕ ‘ವಿಶ್ವ ವಿಜಯಿ’ ಮಾಡುವ ಒಂದು ಅನಾರೋಗ್ಯಕರ ಸ್ಪರ್ಧೆಗೆ ನಾವೆಲ್ಲರೂ ಸಿದ್ದರಾಗುತ್ತೇವೆ. ಮಗು ತನಗೆ ಇಷ್ಟ ಇಲ್ಲದಿದ್ದರೂ ರೇಸಿಗೆ ನಿಲ್ಲಬೇಕಾದ ಅನಿವಾರ್ಯತೆ ಇದೆ. ಶಾಲೆಗಳಲ್ಲಿ ಬುದ್ಧಿವಂತ ಮಕ್ಕಳು ಮತ್ತು ದಡ್ಡ ಮಕ್ಕಳು ಎಂದೆಲ್ಲ ವರ್ಗೀಕರಣ ಮಾಡುವ ವ್ಯವಸ್ಥೆಯು ಮಕ್ಕಳ ಭವಿಷ್ಯಕ್ಕೆ ಖಂಡಿತವಾಗಿಯೂ ಮಾರಕ.

ಬೋರ್ಡ್ ಪರೀಕ್ಷೆಗಳಲ್ಲಿ ರಾಂಕ್ ಪದ್ಧತಿ ಈಗ ಇಲ್ಲ

ಈ ಅನಾರೋಗ್ಯಕರ ಒತ್ತಡದಿಂದ ನೂರಾರು ಮಕ್ಕಳು ಕುಗ್ಗಿಹೋಗುವುದು, ಡಿಪ್ರೆಶನ್ನಿಗೆ ಹೊರಟುಹೋಗುವುದು, ಕೊನೆಗೆ ಆತ್ಮಹತ್ಯೆಯಂತಹ ದುರಂತಕ್ಕೆ ಬಲಿಯಾಗುವುದು…ಇದನ್ನೆಲ್ಲ ಗಮನಿಸಿದ ಪರೀಕ್ಷಾ ಮಂಡಳಿಗಳು ರ್ಯಾಂಕ್ ಪದ್ಧತಿಯನ್ನು ಕೈ ಬಿಟ್ಟಿವೆ. ಈಗ ಫಲಿತಾಂಶ ಘೋಷಣೆ ಮಾಡುವಾಗ ಒಬ್ಬ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ ರಾಂಕ್, ಜಿಲ್ಲೆಗೆ ಪ್ರಥಮ, ತಾಲೂಕಿಗೆ ಪ್ರಥಮ ಎಂದೆಲ್ಲ ಬೋರ್ಡ್ ಘೋಷಣೆ ಮಾಡಬಾರದು ಎಂಬುದು ಒಂದು ಒಳ್ಳೆಯ ಆಶಯ. ವಿದ್ಯಾರ್ಥಿಯ ಅಂಕಪಟ್ಟಿಯಲ್ಲಿ ಕೂಡ ಅಂತಹ ಅಂಶಗಳು ಇರುವುದಿಲ್ಲ ಎನ್ನುವುದನ್ನು ಗಮನಿಸಿ. A+, A, B+ ಮೊದಲಾದ ಗ್ರೇಡ್‌ಗಳು ಅವರ ಅಂಕಗಳ ಜತೆಗೆ ಇರುತ್ತವೆ ಹೊರತು ರ್ಯಾಕ್ ಎಲ್ಲಿಯೂ ಇರುವುದಿಲ್ಲ. CET, NEET ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರ್ಯಾಂಕ್‌ ಅನಿವಾರ್ಯ ಹೌದು. ಆದರೆ ಇಂದು ರಾಜ್ಯಮಟ್ಟದ ಪರೀಕ್ಷಾ ಮಂಡಳಿಗಳು ರ್ಯಾಂಕ್‌ ಪದ್ಧತಿಯನ್ನು ಕೈಬಿಟ್ಟಿವೆ.
ಶೈಕ್ಷಣಿಕ ಗುಣಮಟ್ಟದ ವೃದ್ಧಿಗಾಗಿ ಜಿಲ್ಲೆ, ತಾಲೂಕು ಫಲಿತಾಂಶಗಳನ್ನು ಇಲಾಖೆ ಗಮನಿಸುತ್ತದೆ. ಶಾಲೆಗಳಿಗೂ ರ್ಯಾಕಿಂಗ್ ಪದ್ಧತಿ ಇದೆ. ಇದು ಖಂಡಿತವಾಗಿ ಸ್ವಾಗತಾರ್ಹ ಬೆಳವಣಿಗೆ. ಆದರೆ ಅಲ್ಲಿಯೂ ಅಡ್ಡದಾರಿ ಹುಡುಕುವ ಮೇಧಾವಿಗಳು ಇದ್ದಾರೆ. ಫಲಿತಾಂಶಕ್ಕಾಗಿ ಏನು ಬೇಕಾದರೂ ಮಾಡಲು ಶ್ರೀಮಂತ ಶಾಲೆಗಳು ಮುಂದಾಗುತ್ತವೆ.
ಪತ್ರಿಕೆ, ಟಿವಿ ಮಾಧ್ಯಮದ ಮಂದಿ ಬೋರ್ಡ್ ಘೋಷಣೆ ಮಾಡದಿದ್ದರೂ ಈ ವಿದ್ಯಾರ್ಥಿಯು ರಾಜ್ಯಕ್ಕೆ ಪ್ರಥಮ, ರಾಜ್ಯಕ್ಕೆ ದ್ವಿತೀಯ ಎಂದು ಘೋಷಣೆ ಮಾಡುತ್ತಾರೆ. ಪ್ರತಿಷ್ಠಿತ ಶಾಲೆಗಳಿಗೂ ಈ ಪ್ರಚಾರ ಬೇಕು. ಪರಿಣಾಮವಾಗಿ ಅನಿವಾರ್ಯ ಒತ್ತಡ ಕ್ರಿಯೇಟ್ ಆಗುವುದು ಯಾರ ಮೇಲೆ? ಎಸೆಸೆಲ್ಸಿ, ಪಿಯುಸಿ ಫಲಿತಾಂಶವು ಪ್ರತಿಷ್ಠೆಯ ಪ್ರಶ್ನೆ ಆದಾಗ ಕೊನೆಗೆ ಬಲಿಪಶು ಆಗುವುದು ಯಾರು?

ಒತ್ತಡ ಹಾಕದಿದ್ದರೆ ಮಕ್ಕಳು ಇನ್ನೂ ಚೆನ್ನಾಗಿ ಓದುತ್ತಾರೆ

ನಾನು ಓದಿರುವ ಅಷ್ಟೂ ಮನಶ್ಯಾಸ್ತ್ರೀಯ ಸಿದ್ದಾಂತಗಳ ಬೆಳಕಿನಲ್ಲಿ ನನ್ನ ಖಚಿತವಾದ ಅಭಿಪ್ರಾಯ ಎಂದರೆ ಮಕ್ಕಳಿಗೆ ಒತ್ತಡ ಹಾಕದಿದ್ದರೆ ಇನ್ನೂ ಚೆನ್ನಾಗಿ ಓದುತ್ತಾರೆ ಎಂಬುದು. ಒತ್ತಡ ಹಾಕದಿದ್ದರೆ ಇನ್ನೂ ಹೆಚ್ಚು ಅಂಕ ತೆಗೆದುಕೊಳ್ಳುತ್ತಾರೆ. ಈ ಒತ್ತಡ (ಒಳಗಿನ ಮತ್ತು ಹೊರಗಿನ ಒತ್ತಡ) ಮಗುವಿನ ಸಹಜವಾದ ಪ್ರತಿಭೆಗಳನ್ನು ಇಂಚಿಂಚೂ ಸಾಯಿಸುತ್ತಿದೆ.
ಪರೀಕ್ಷೆಗಳು ಅನಿವಾರ್ಯ ಹೌದು, ಆದರೆ ಲಿಖಿತ ಪರೀಕ್ಷೆಯ ಅಂಕಗಳ ಜೊತೆಗೆ ಪ್ರಾಜೆಕ್ಟ್ ಆಧಾರಿತ ಅಂಕಗಳನ್ನು ನೀಡುವುದು, ಇದನ್ನೆಲ್ಲ ಇಲಾಖೆಯು ಈಗಾಗಲೇ ಹುಡುಕಿದೆ. ಮಗುವಿನ ಸಂತಸದಾಯಕ ಕಲಿಕೆಗೆ ಹೆಚ್ಚು ಆದ್ಯತೆ ದೊರೆಯಬೇಕು ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ. ಮಗು ಕೇವಲ ಮಾರ್ಕ್‌ಗಳಿಗಾಗಿ ಓದದೆ ಜ್ಞಾನಕ್ಕಾಗಿ ಓದಬೇಕು, ಮಗು ಸಹಜವಾದ ಆಸಕ್ತಿಯಿಂದ ಓದಬೇಕು ಎನ್ನುವುದು ನನ್ನ ಖಚಿತವಾದ ಅಭಿಪ್ರಾಯ.
ಪ್ರತಿ ಮಗು ಅನನ್ಯ ಆಗಿರುತ್ತದೆ. ಒಂದೇ ಅಳತೆ ಪಟ್ಟಿಯಿಂದ ಎಲ್ಲ ಮಕ್ಕಳ ಪ್ರತಿಭೆಗಳನ್ನು ಅಳತೆ ಮಾಡುವ ವ್ಯವಸ್ಥೆ ಮೊದಲು ಬದಲಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪೋಷಕರ ಮೈಂಡ್‌ಸೆಟ್ ಬದಲಾಗಬೇಕು. ಯಾಕೆಂದರೆ ನಮ್ಮ ಮಗುವಿನ ಜೀವವು ಅದು ಪಡೆಯುವ ಅಂಕಗಳಿಗಿಂತ ಹೆಚ್ಚು ಬೆಲೆ ಬಾಳುತ್ತದೆ. ಅಲ್ಲವೇ?
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top