ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮಕ್ಕೆ ಮುನ್ನದಿನವಾದ ಜ. 21ರಂದು ಸಂಜೆ 3.30ಕ್ಕೆ ದರ್ಬೆ ದುಗ್ಗಣ್ಣ ದೇರಣ್ಣ ಸಭಾಭವನದ ಬಳಿಯಿಂದ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಸಂಜೆ 3.30ಕ್ಕೆ ಸರಿಯಾಗಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ಸಿಗಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ಶಾಸಕ ಸಂಜೀವ ಮಠಂದೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರು ತೆಂಗಿನಕಾಯಿ ಒಡೆದು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
250ಕ್ಕೂ ಅಧಿಕ ಪಿಕಪ್‍ಗಳು ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಮೆರವಣಿಗೆಗೆ ಹೊಸ ಶೋಭೆ ತರಲಿದೆ. ಇದರ ಜೊತೆಗೆ ಇತರ ವಾಹನಗಳು ಜೊತೆಯಾಗಲಿದೆ. ಮುಂಭಾಗದಿಂದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಭಾವಚಿತ್ರವುಳ್ಳ ವಾಹನ ಸಾಗಿದರೆ, ಅದನ್ನು ಅನುಸರಿಸಿ ಹೊರೆಕಾಣಿಕೆ ಹೊತ್ತ ವಾಹನಗಳು ಸಾಗಲಿದೆ. ದರ್ಬೆ, ಪುತ್ತೂರು ಪೇಟೆಯಾಗಿ ಸಾಗಲಿರುವ ಹೊರೆಕಾಣಿಕೆ ಮೆರವಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಬಳಿಕ ಸಭಾಭವನದತ್ತ ತೆರಳಲಿದೆ. ನಂತರ ಫಲಾಹಾರದ ವ್ಯವಸ್ಥೆ ಇರುತ್ತದೆ.
ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಉಪ್ಪಿನಂಗಡಿ, ನೆಲ್ಯಾಡಿ ಭಾಗದವರು ಬೈಪಾಸ್ ರಸ್ತೆಯಾಗಿ ದರ್ಬೆ ದುಗ್ಗಮ್ಮ ದೇರಣ್ಣ ಸಭಾಭವನದ ಬಳಿ ಸೇರಬೇಕು. ಕುಂಬ್ರ ಭಾಗದಿಂದ ಬರುವವರು ದರ್ಬೆ ಸಭಾಭವನದ ಬಳಿ ನಿಂತರೆ, ಸವಣೂರು, ಕಡಬ, ಆಲಂಕಾರು ಭಾಗದಿಂದ ಬಂದವರು ದರ್ಬೆ ವೃತ್ತದಿಂದಾಗಿ ಬಂದು ದುಗ್ಗಮ್ಮ ದೇರಣ್ಣ ಸಭಾಭವನದ ಬಳಿ ಆಗಮಿಸಬೇಕು ಎಂದು ಹೊರೆಕಾಣಿಕೆ ಮೆರವಣಿಗೆ ಸಮಿತಿಯ ಸಂಚಾಲಕ ಪ್ರವೀಣ್ ಕುಂಟ್ಯಾನ, ಸಹಸಂಚಾಲಕರಾದ ಗೋವರ್ಧನ್ ಕಲ್ಲೇಗ, ನಾಗೇಶ್ ಕೆಡೆಂಜಿ, ಸುರೇಶ್ ಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.