ದೇವಸ್ಥಾನದ ಆಡಳಿತ ಮಂಡಳಿಯಿಂದ ಬ್ಯಾನರ್ ತೆರವು
ಮಂಗಳೂರು : ಕರಾವಳಿಯಲ್ಲಿ ಅನ್ಯ ಧರ್ಮೀಯರಿಗೆ ಹಿಂದುಗಳ ಜಾತ್ರೆಯಲ್ಲಿ ವ್ಯಾಪಾರ ಮಾಡಲಿಕ್ಕೆ ಅವಕಾಶ ಕೊಡುತ್ತಿರುವುದಕ್ಕೆ ಪ್ರತಿರೋಧ ಮುಂದುವರಿದಿದೆ. ಇತ್ತೀಚೆಗೆ ಮಂಗಳರಿನ ಕಾವೂರು ಜಾತ್ರೆ ಸಂದರ್ಭದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬ್ಯಾನರ್ ಅಳವಡಿಕೆಯಾಗಿತ್ತು. ಇದೀಗ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲೂ ಇದೇ ರೀತಿಯ ಬ್ಯಾನರ್ ಹಾಕಲಾಗಿದೆ. ಆದರೆ ಬ್ಯಾನರ್ ಅಳವಡಿಸಿದ ಕೆಲವೇ ಗಂಟೆಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಬ್ಯಾನರನ್ನು ತೆರವುಗೊಳಿಸಿದೆ.
ಕದ್ರಿ ದೇವಸ್ಥಾನದಲ್ಲಿ ಜ.15ರಿಂದ ಜ.25ರವರೆಗೆ ವಾರ್ಷಿಕ ಜಾತ್ರೆ ನಡೆಯುತ್ತಿದ್ದು, ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಶಿವಶಕ್ತಿ ಶಾಖೆ ಹೆಸರಿನಲ್ಲಿ ʼಕದ್ರಿ ಮಂಜುನಾಥನ ಜಾತ್ರೆಯಲ್ಲಿ ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ. ಕುಕ್ಕರ್ ಬಾಂಬ್ ಆರೋಪಿ ಮೊದಲು ಟಾರ್ಗೆಟ್ ಮಾಡಿದ್ದು ಕದ್ರಿ ದೇವಸ್ಥಾನವನ್ನು. ಅಂತಹ ಮನಸ್ಥಿತಿ ಉಳ್ಳವರಿಗೆ ವಿಗ್ರಹಾರಾಧನೆಯನ್ನು ಹರಾಮ್ ಎಂದು ನಂಬಿರುವ ಯಾರಿಗೂ ಇಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ’ ಅಳವಡಿಸಿದ ಬ್ಯಾನರ್‌ನಲ್ಲಿ ಬರೆಯಲಾಗಿತ್ತು.
ಅನ್ಯಧರ್ಮೀಯರಿಗೆ ವ್ಯಾಪಾರ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಆಗಿರುವುದು ಗಮನಕ್ಕೆ ಬರುತ್ತಿದ್ದಂತೆ ಕ್ಷೇತ್ರದ ಆಡಳಿತ ಮಂಡಳಿ ಬ್ಯಾನರರ್‌ನ್ನು ತೆರವುಗೊಳಿಸಿದೆ. ಕದ್ರಿ ಪೊಲೀಸರಿಗೆ ಸೂಚನೆ ನೀಡಿ ಆಡಳಿತ ಮಂಡಳಿ ಬ್ಯಾನರ್ ತೆರವು ಮಾಡಿದ್ದಾರೆ.
ಬ್ಯಾನರ್ ತೆರವು ಮಾಡಿದ ಬಗ್ಗೆ ವಿಎಚ್‌ಪಿ ಪ್ರಮುಖರು ದೇವಸ್ಥಾನದ ಆಡಳಿತ ಮಂಡಳಿ ಬಳಿ ಸ್ಪಷ್ಟನೆ ಕೇಳಿದಾಗ, ಈಗಾಗಲೇ ಅನ್ಯ ಮತೀಯ ವ್ಯಾಪಾರಿಗಳು ಜಾಗ ತೆರವು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗುವುದು ಬೇಡ ಎಂದು ಬ್ಯಾನರ್ ತೆರವು ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಶ್ವ ಹಿಂದೂ ಪರಿಷತ್ ಮಾಧ್ಯಮ ಪ್ರಮುಖ್ ಪ್ರದೀಪ್ ಸರಿಪಳ್ಳ, ವಿಗ್ರಹ ಆರಾಧನೆಯನ್ನು ಹರಾಮ್ ಅಂದವರಿಗೆ ಜಾತ್ರೋತ್ಸವದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಕುಕ್ಕರ್ ಬಾಂಬ್ ಸ್ಫೋಟ ಮಾಡಿದ ಉಗ್ರ ಶಾರೀಕ್ ಕೂಡಾ ಕದ್ರಿ ದೇವಸ್ಥಾನವನ್ನು ಸ್ಫೋಟಿಸುವ ಸಂಚು ರೂಪಿಸಿದ್ದ. ಈಗ ಅನ್ಯ ಮತೀಯರಿಗೆ ಕದ್ರಿ ದೇವಸ್ಥಾನದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿದರೆ ಕ್ಷೇತ್ರಕ್ಕೆ ತೊಂದರೆಯಾಗುವುದಿಲ್ಲ ಎಂದು ಏನು ಗ್ಯಾರಂಟಿ ಎಂದು ಪ್ರಶ್ನಿಸಿದ್ದಾರೆ.