ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಲ್ಲಿ ಗ್ರಾಹಕ ಸಮಾವೇಶವನ್ನು ಸೋಮವಾರ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಸಮಾವೇಶದಲ್ಲಿ ಗ್ರಾಹಕರ ಅವಶ್ಯಕತೆಗೆ ಪೂರಕವಾಗಿ ನೂತನ ಬ್ಯಾಂಕಿಂಗ್ ತಂತ್ರಜ್ಞಾನ ಮತ್ತು ನೇರ ಎನ್. ಇ. ಎಫ್.ಟಿ. , ಆರ್. ಟಿ. ಜಿ. ಎಸ್ ಹಾಗೂ ಕ್ಯೂ ಆರ್ ಕೋಡ್ ಸೌಲಭ್ಯಗಳ ಅನುಷ್ಠಾನ ಉದ್ಘಾಟಿಸಲಾಯಿತು
ದ. ಕ. ಜಿಲ್ಲಾ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಚೇರ್ ಮ್ಯಾನ್ ಸಿ.ಎ ಶಾಂತರಾಮ ಶೆಟ್ಟಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಾಲಗಳ ವಿಳಂಬ ಆಗುವಾಗ ಸೊಸೈಟಿಯೇ ಗ್ರಾಹಕರಿಗೆ ವರದಾನವಾಗುತ್ತದೆ. ಸೊಸೈಟಿಯಿಂದ ಜನರ ಜೀವನ ಶೈಲಿ ಬದಲಾವಣೆ ಆಗಿದೆ. ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ 115 ವರ್ಷದ ಇತಿಹಾಸದೊಂದಿಗೆ ಗ್ರಾಹಕರ ಕುಟುಂಬವಾಗಿದೆ. ಈ ನಿಟ್ಟಿನಲ್ಲಿ ಸೇವೆಯನ್ನು ಮೂಲೆ ಮೂಲೆಗೆ ಕೊಂಡೊಯ್ಯಲು ಶಾಖೆಗಳನ್ನು ಮಾಡುವುದು ಅಗತ್ಯ ಎಂದ ಅವರು, ನೂತನ ಕಾರ್ಯನಿರ್ವಹಣಾಧಿಕಾರಿಯವರು ರೂಪಿಸಿದ ಹೊಸ ಹೊಸ ಯೋಜನೆಗಳ ಸದುಪಯೋಗವನ್ನು ಗ್ರಾಹಕರು ಪಡೆಯಬೇಕೆಂದರು.
ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂತ್ರಜ್ಞಾನವನ್ನು 2000ನೇ ಇಸವಿಯಿಂದಲೇ ಬ್ಯಾಂಕ್ ನಲ್ಲಿ ಅಳವಡಿಸಿದ್ದೇವೆ. ಆದರೆ ಬದಲಾವಣೆ ಆದಂತೆ ಹೊಸ ತಂತ್ರಜ್ಞಾನ ಅನುಷ್ಠಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನವನ್ನು ಅಳವವಡಿಸಿ ಗ್ರಾಹಕರಿಗೆ ಬೇರೆ ಬೇರೆ ರೀತಿಯ ಸೌಲಭ್ಯ ನೀಡುತ್ತಿದ್ದೇವೆ ಎಂದರು.
ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅತ್ಯಂತ ಕಟ್ಟುನಿಟ್ಟಿನ ರೂಲ್ಸ್ ಗಳನ್ನು ಟೌನ್ ಬ್ಯಾಂಕ್ ಗೆ ನೀಡಿದರೂ ಕರ್ನಾಟಕದಲ್ಲಿ ಟೌನ್ ಬ್ಯಾಂಕ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಬ್ಯಾಂಕ್ ನ ಉಪಾಧ್ಯಕ್ಷ ವಿಶ್ವಾಸ್ ಶೆಣೈ ಶುಭ ಹಾರೈಸಿದರು.
ಸಮಾವೇಶದಲ್ಲಿ ಬ್ಯಾಂಕ್‌ಗೆ ನೂತನ ತಂತ್ರಜ್ಞಾನ ಅಳವಡಿಸಿದ ಕಂಪೆನಿಯ ಮುಖ್ಯ ತಂತ್ರಜ್ಞ ಮಧುಸೂಧನ್ ಮತ್ತು ಬಳಗದವರನ್ನು ಗೌರವಿಸಲಾಯಿತು. ಬ್ಯಾಂಕ್‌ನ ನಿರ್ದೇಶಕರಾದ ಎ. ವಿ. ನಾರಾಯಣ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಕಿರಣ್ ರೈ, ಚಂದ್ರಶೇಖರ್ ಗೌಡ, ಮಲ್ಲೇಶ್, ಮೋಹಿನಿ, ಹೇಮಾವತಿ ಸಹಿತ ಬ್ಯಾಂಕ್‌ನ ಗ್ರಾಹಕರು ಉಪಸ್ಥಿತರಿದ್ದರು. ಬ್ಯಾಂಕ್‌ನ ಸಿಬ್ಬಂದಿ ಜ್ಯೋತಿ ವಂದಿಸಿದರು. ಉಪ ಮಹಾಪ್ರಬಂಧಕ ಚೇತನ್ ಉಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ಗೌಡ ಇಚಿಲಂಪಾಡಿ ಅವರಿಗೆ ಕ್ಯೂಆರ್ ಕೋಡ್ ಹಸ್ತಾಂತರಿಸಲಾಯಿತು.