ಅಶೋಕ್ ಕುಮಾರ್ ರೈ ಬಿಜೆಪಿ ಸದಸ್ಯನೇ ಅಲ್ಲವೆಂದ ಬಿಜೆಪಿ ಮುಖಂಡರು | 6 ವರ್ಷ ಹಿಂದೆಯೇ ಫಿಕ್ಸ್ ಆಗಿತ್ತೇ ಕಾಂಗ್ರೆಸ್ ಸೇರುವ ಪ್ಲಾನ್

ಪುತ್ತೂರು: ಕಾಂಗ್ರೆಸಿನ ಪುತ್ತೂರು ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಅವರ ಹೆಸರು ಗಟ್ಟಿಯಾಗಿ ಕೇಳಿಬರುತ್ತಿರುವ ನಡುವೆಯೇ, ಅಶೋಕ್ ಕುಮಾರ್ ರೈ ಅವರು ಕಳೆದ 6 ವರ್ಷಗಳಿಂದ ಬಿಜೆಪಿ ಸದಸ್ಯತನವನ್ನೇ ನವೀಕರಿಸಿಲ್ಲ ಎಂಬ ಮಾಹಿತಿಯನ್ನು ಪುತ್ತೂರು ಬಿಜೆಪಿ ಪ್ರಮುಖರು ಖಾತ್ರಿ ಪಡಿಸಿದ್ದಾರೆ.

ಅಶೋಕ್ ಕುಮಾರ್ ರೈ ಅವರು ಶಾಸಕ ಆಕಾಂಕ್ಷಿ ಅಭ್ಯರ್ಥಿ ಎನ್ನುವುದು ಕೆಲ ವರ್ಷಗಳಿಂದಲೇ ಪ್ರಚಲಿತದ್ದಲ್ಲಿತ್ತು. ಇದರಲ್ಲೇನು ಹೊಸತನವಿಲ್ಲ. ಆದರೆ ಏಕಾಏಕೀ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿದ್ದಾರೆ ಎಂದರೆ ಹಲವರ ಹುಬ್ಬು ಗಂಟ್ಟಿಕ್ಕುವಂತೆ ಮಾಡಿತ್ತು. ಇದೀಗ ಇದಕ್ಕೂ ಉತ್ತರ ಸಿಕ್ಕಿದೆ – ಕಳೆದ 6 ವರ್ಷಗಳಿಂದ ಬಿಜೆಪಿಯ ಸದಸ್ಯತನವನ್ನೇ ಅಶೋಕ್ ಕುಮಾರ್ ರೈ ಅವರು ನವೀಕರಿಸಿಲ್ಲ ಎಂದು ಹೇಳುವ ಮೂಲಕ, ಅವರು ಬಿಜೆಪಿ ಸದಸ್ಯನೇ ಆಗಿರಲಿಲ್ಲ ಎನ್ನುವುದನ್ನು ಸಾರಿದ್ದಾರೆ. ಅಂದರೆ ಆರು ವರ್ಷಗಳ ಹಿಂದೆಯೇ ಅಶೋಕ್ ಕುಮಾರ್ ರೈ ಅವರು ಕಾಂಗ್ರೆಸ್ ಸೇರುವುದು ಖಾತ್ರಿಯಾಗಿತ್ತು ಎನ್ನುವುದು ಇದರಿಂದ ಸಾಬೀತಾಗುತ್ತದೆ.

ಬಿಜೆಪಿ ಮತಗಳು ಭದ್ರ:



































 
 

ಇನ್ನು ಕೆಲವೇ ದಿನಗಳಲ್ಲಿ ಚುನಾವಣಾ ದಿನಾಂಕ ಪ್ರಕಟಗೊಳ್ಳಲಿದೆ. ಅದಕ್ಕೆ ಮೊದಲೇ ಅಂದರೆ ಜನವರಿ 22ರಂದು ಮಂಗಳೂರಿಗೆ ಆಗಮಿಸುವ ಕಾಂಗ್ರೆಸ್ ರಾಜ್ಯ ನಾಯಕರು, ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದ್ದಾರೆ ಎಂಬ ಮಾಹಿತಿಯೂ ಇದೆ. ಪುತ್ತೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಅವರು ಸ್ಪರ್ಧಿಸುತ್ತಾರೆ ಎನ್ನುವುದು ಇಂದು ಗಾಸಿಪ್ ಸುದ್ದಿಯಾಗಿ ಉಳಿದಿಲ್ಲ. ಇದಕ್ಕೆ ಪುಷ್ಟಿ ನೀಡಿರುವುದು, ಸೀರೆ ವಿತರಣಾ ಸಮಾರಂಭ. ಸೀರೆ ವಿತರಣೆಯ ದಶಮಾನೋತ್ಸವ ನೆಪದಲ್ಲಿ ಸಾವಿರಾರು ಜನರನ್ನು ಸೇರಿಸಿ, ಅಲ್ಲಿಗೆ ಪ್ರಮುಖ ರಾಜಕೀಯ ನಾಯಕರನ್ನು ಆಹ್ವಾನಿಸಿ, ಅವರ ಮುಂದೆ ತಮ್ಮ ಶಕ್ತಿ ಪ್ರದರ್ಶನ ಮಾಡಿಯೇ ಬಿಟ್ಟಿದ್ದರು ಅಶೋಕ್ ಕುಮಾರ್ ರೈ.

ಜನ ಸೇರಿಸಿ, ಸೀರೆ ಹಂಚಿ ಮತ ಗಿಟ್ಟಿಸಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ನಿಜ. ಇದಕ್ಕೂ ಪರೋಕ್ಷವಾಗಿ ಉತ್ತರ ನೀಡಿರುವ ಪುತ್ತೂರು ಬಿಜೆಪಿ ಪ್ರಮುಖರು, ಬಿಜೆಪಿ ಮತಗಳು ಭದ್ರವಾಗಿವೆ ಎಂದು ತಿಳಿಸಿದ್ದಾರೆ. ಅಂದರೆ ಬಿಜೆಪಿಯ ಮತಗಳನ್ನು ಸೆಳೆಯುವ ಅಶೋಕ್ ಕುಮಾರ್ ರೈ ಅವರ ಆಟ ತಮ್ಮ ಬಳಿ ನಡೆಯದು ಎನ್ನುವುದನ್ನು ನೇರವಾಗಿ ಹೇಳಿದಂತಿದೆ.

ಬಿಜೆಪಿ ಸದಸ್ಯನೇ ಅಲ್ಲ:

ಶಾಸಕ ಸೀಟಿಗಾಗಿ ತೆರೆಮರೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದ ಅಶೋಕ್ ಕುಮಾರ್ ರೈ ಅವರು, ಬಿಜೆಪಿ ಸದಸ್ಯನೇ ಆಗಿರಲಿಲ್ಲ ಎನ್ನುವುದು ಕುತೂಹಲದ ವಿಚಾರ. 5 ವರ್ಷಗಳ ಹಿಂದೆ ವಿಧಾನಸಭೆ ಚುನಾವಣೆ ನಡೆದಿತ್ತು. ಆ ಸಂದರ್ಭವೂ ಅಶೋಕ್ ಕುಮಾರ್ ರೈ ಅವರು ಬಿಜೆಪಿ ಟಿಕೇಟಿಗಾಗಿ ಸಾಕಷ್ಟು ಶ್ರಮ ವಹಿಸಿದ್ದರು. ಆದರೆ ಶ್ರಮ ಫಲ ಕೊಟ್ಟಿರಲಿಲ್ಲ. ವಿಚಿತ್ರವೆಂದರೆ, ಆಗಲೂ ಅಶೋಕ್ ಕುಮಾರ್ ರೈ ಅವರು ಬಿಜೆಪಿ ಸದಸ್ಯನಾಗಿಯೇ ಇರಲಿಲ್ಲವೇ ಎನ್ನುವುದು. ಬಿಜೆಪಿ ಸದಸ್ಯನೇ ಅಲ್ಲದ ವ್ಯಕ್ತಿ ಶಾಸಕ ಟಿಕೇಟಿಗಾಗಿ ಒತ್ತಡ ಹಾಕಿದ್ದರು ಎನ್ನುವುದೇ ಸೋಜಿಗದ ವಿಷಯ.

ಕಾಂಗ್ರೆಸ್‍ ಮೂಲ ಆಕಾಂಕ್ಷಿಗಳ ಗತಿಯೇನು?

ಪ್ರತಿವರ್ಷ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಶಾಸಕ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇದೆ. ಈ ವರ್ಷದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. 13 ಮಂದಿ ಆಕಾಂಕ್ಷಿಗಳು ತಮಗೆ ಟಿಕೇಟ್ ಕೊಡಿರೆಂದು ಪಟ್ಟು ಹಿಡಿದು ಕೂತಿದ್ದಾರೆ. ಅಂದ ಹಾಗೇ, ಅವರೆಲ್ಲಾ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ನಿಷ್ಠಾವಂತರೇ ಆಗಿದ್ದಾರೆ. ಇದರ ನಡುವೆ ಅಶೋಕ್ ಕುಮಾರ್ ರೈ ಅವರು ಕಾಂಗ್ರೆಸಿಗೆ ಹೊಸ ಮುಖ. ಇದುವರೆಗೆ ಬಿಜೆಪಿ ಮುಖಂಡರ ಜೊತೆಗೆ ಗುರುತಿಸಿಕೊಂಡಿದ್ದ ಅಶೋಕ್ ಕುಮಾರ್ ರೈ ಅವರನ್ನು ಕರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸುತ್ತಾರೆ ಎಂದರೆ, ಪಕ್ಷಾ ನಿಷ್ಠಾವಂತರ ಗತಿಯೇನು? ಕಾವು ಹೇಮನಾಥ ಶೆಟ್ಟಿ ಅವರಂತೂ ಹಲವು ವರ್ಷಗಳಿಂದಲೇ ಪಕ್ಷಕ್ಕಾಗಿ ಹಗಲಿರುಳು ದುಡಿದವರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಹಿರಿಯರೂ ಆಗಿರುವ ಎಂ.ಬಿ. ವಿಶ್ವನಾಥ ರೈ ಅವರು ಟಿಕೇಟ್ ಆಕಾಂಕ್ಷಿ. ಸತೀಶ್ ಕುಮಾರ್ ಕೆಡೆಂಜಿ ಅವರೂ ಈ ಭಾಗದ ಪ್ರಭಾವಿ ನಾಯಕ. ಇನ್ನೊಂದೆಡೆ ದಿವ್ಯಪ್ರಭಾ ಚಿಲ್ತಡ್ಕ ಅವರು ರಾಜ್ಯಮಟ್ಟದಲ್ಲೇ ಗುರುತಿಸಿಕೊಂಡವರು. ಅಶೋಕ್ ಕುಮಾರ್ ರೈ ಅವರಿಗೆ ಟಿಕೇಟ್ ನೀಡಿದರೆ, ಪಕ್ಷ ನಿಷ್ಠಾವಂತರ ಗತಿಯೇನು?

6 ವರ್ಷ ಕಾದದ್ದೇಕೆ?
ಕಳೆದ 6 ವರ್ಷಗಳಿಂದ ಬಿಜೆಪಿ ಸದಸ್ಯತನವನ್ನೇ ನವೀಕರಿಸಿಲ್ಲ ಎಂದರೆ, ಮೊನ್ನೆ – ಮೊನ್ನೆಯವರೆಗೂ ಬಿಜೆಪಿ ಟಿಕೇಟಿಗಾಗಿ ಓಡಾಡಿದ್ದು ಯಾಕೆ ಎಂಬ ಪ್ರಶ್ನೆ ಮೂಡುತ್ತದೆ. ಹಿಂದುತ್ವದ ಮತಗಳನ್ನು ಗಿಟ್ಟಿಸಿಕೊಳ್ಳಲು ಅಶೋಕ್ ಕುಮಾರ್ ರೈ ಹೀಗೆ ಮಾಡಿದ್ದರು ಎಂದು ಕೆಲವು ಮೂಲಗಳು ಹೇಳುತ್ತವೆ. ಪುತ್ತೂರು ಹಿಂದುತ್ವದ ಭದ್ರಕೋಟೆ. ಹಿಂದಿನ ಬಾರಿ ಶಕುಂತಳಾ ಶೆಟ್ಟಿ ಜಯಗಳಿಸಿದ್ದರೂ, ಅವರಿಗೆ ಅನುಕಂಪದ ಆಧಾರದಲ್ಲಿ ಅನೇಕ ಹಿಂದುತ್ವದ ಮತಗಳು ಸಿಕ್ಕಿದ್ದವು. ಆದ್ದರಿಂದ ಜಯ ಗಳಿಸಿದ್ದರು. ಆದರೆ ಅದು ಎರಡನೇ ಬಾರಿ ನಡೆಯಲಿಲ್ಲ. ಈ ಲೆಕ್ಕಾಚಾರ ಅರಿತಿದ್ದ ಅಶೋಕ್ ಕುಮಾರ್ ರೈ, ಬಿಜೆಪಿ ಪಾಳಯದಲ್ಲೇ ತಾನಿಲ್ಲ ಎಂಬ ಅಂಶವನ್ನು ಬಿಟ್ಟುಕೊಡಲೇ ಇಲ್ಲ. ಅಂದರೆ ಬಿಜೆಪಿ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ಮಾಡಿದ್ದರು ಎಂದೇ ಹೇಳಬಹುದು. ಆದರೆ ಇದು ಎಷ್ಟರಮಟ್ಟಿಗೆ ಫಲ ಕೊಡುತ್ತದೆ ಎನ್ನುವುದನ್ನು ಕಾದು ನೋಡಬೇಕಷ್ಟೇ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top