ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಜನವರಿ 21ರಿಂದ 29ರವೆಗೆ ನಡೆಯಲಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವಾ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 54 ಶಕ್ತಿ ಕೇಂದ್ರ ವ್ಯಾಪ್ತಿಯ 220 ಬೂತ್ಗಳ 55 ಸಾವಿರ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ. ಪೇಜ್ ಪ್ರಮುಖರು ಸಾಥ್ ನೀಡಲಿದ್ದಾರೆ. ಈ ಸಂದರ್ಭ ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಕೆಲಸವೂ ನಡೆಯಲಿದೆ. ಮಿಸ್ಡ್ ಕಾಲ್ ಮೆಂಬರ್ಶಿಪ್ ಅಭಿಯಾನ ನಡೆಯಲಿದೆ. 3 ವರ್ಷಗಳ ಹಿಂದೆ 43 ಸಾವಿರ ಸದಸ್ಯತ್ವ ಮಾಡಲಾಗಿತ್ತು. ಅದನ್ನೀಗ 50 ಸಾವಿರಕ್ಕೆ ಏರಿಸುವ ಗುರಿ ಇದೆ. 29ರಂದು ಅಭಿಯಾನ ಮುಕ್ತಾಯಗೊಳ್ಳಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ನಡೆಸುವ ಮನ್ ಕೀ ಬಾತ್ ಕಾರ್ಯಕ್ರಮವನ್ನು ಕಾರ್ಯರ್ತರು ಬೂತ್ ಮಟ್ಟದ ಒಂದು ಮನೆಯಲ್ಲಿ ಕುಳಿತು ಆಲಿಸಲಿದ್ದಾರೆ ಎಂದು ವಿವರಿಸಿದರು.
ಈಗಾಗಲೇ ಜ. 2ರಿಂದ 12ರವರೆಗೆ ಬೂತ್ ಅಭಿಯಾನ ನಡೆದಿದೆ. ಪ್ರತೀ ಬೂತ್ ವ್ಯಾಪ್ತಿಯಲ್ಲಿ ಕನಿಷ್ಠ 25 ಮನೆಗಳಲ್ಲಿ ಪಕ್ಷದ ಧ್ವಜ ಅಳವಡಿಸಲಾಗಿದೆ. 220 ಬೂತ್ ವ್ಯಾಪ್ತಿಯಲ್ಲಿ 5500 ಧ್ವಜ ಅಳವಡಿಸಲಾಗಿದೆ. ವಿಧಾನಸಭಾ ಚುನಾವಣೆಗೆ 80 ದಿನಗಳಿದ್ದು, ಇದೀಗ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ರಾಜ್ಯ ಮಟ್ಟದ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ 21ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಉದ್ಘಾಟಿಸಲಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಕಾರ್ಯಕ್ರಮವನ್ನು ಉಪ್ಪಿನಂಗಡಿಯಲ್ಲಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಈ ಅಭಿಯಾನ ಮುಗಿಯುವ ಹೊತ್ತಿಗೆ ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಸದಸ್ಯರ ಸಂಖ್ಯೆಯನ್ನು 50 ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಮಂಡಲ ಬಿಜೆಪಿ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ, ವಿಜಯ ಸಂಕಲ್ಪ ಅಭಿಯಾನ ಸಮಿತಿಯ ಸಹ ಸಂಚಾಲಕ ಸುನಿಲ್ ದಡ್ಡು ಉಪಸ್ಥಿತರಿದ್ದರು.