ಪುತ್ತೂರು: ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚತುರ್ಥ ಸ್ಥಾನ ಪಡೆದ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ 7ನೇ ತರಗತಿ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್. ಅವರಿಗೆ ಪ್ರತಿಷ್ಠಿತ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರು ವತಿಯಿಂದ ಸನ್ಮಾನ ಕಾರ್ಯಕ್ರಮ ಶುಕ್ರವಾರ ಸಂಜೆ ನ್ಯೂಸ್ ಪುತ್ತೂರು ಕಚೇರಿಯಲ್ಲಿ ನಡೆಯಿತು.
ಶ್ರೀಮಾ ಕೆ.ಎಚ್. ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಹಾರ ಹಾಕಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರಾದ ವಸಂತ ವೀರಮಂಗಲ ಶ್ರೀಮಾ ಸಾಧನೆಯ ಕುರಿತು ಮಾತನಾಡಿದರು. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಉಬರಡ್ಕ, ಪ್ರಧಾನ ಕಾರ್ಯದರ್ಶಿ ಮುರಳೀಧರ ಕೆ.ಎಲ್. ನಿರ್ದೇಶಕರಾದ ಚಿದಾನಂದ ಬೈಲಾಡಿ, ಸೀತಾರಾಮ ಕೇವಳ, ಪ್ರವೀಣ್ ಕುಂಟ್ಯಾಣ, ವೆಂಕಟೇಶ್ ಭಟ್ ಕೊಯಕ್ಕುಡೆ, ಯತೀಶ್ ಎನ್., ನ್ಯೂಸ್ ಪುತ್ತೂರಿನ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ ಕೆಡೆಂಜಿ, ಪ್ರೇರಣಾ ಸಂಸ್ಥೆಯ ಸಿಬ್ಬಂದಿಗಳಾದ ದಯಾಮಣಿ, ಮೋಕ್ಷಿತಾ, ಶ್ರೀಮಾ ಕೆ.ಎಚ್. ಅವರ ತಾಯಿ ಸುಜಿತಾ, ನ್ಯೂಸ್ ಪುತ್ತೂರಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಧ್ಯಪ್ರದೇಶದ ಸಂಗತಾನ್ ಕೇಂದ್ರೀಯ ವಿದ್ಯಾಲಯದಲ್ಲಿ ಫೆ.1ರಿಂದ 4ರ ವರೆಗೆ ಯೋಗಾಸನ ಸ್ಪರ್ಧೆ ನಡೆದಿದ್ದು, ಸ್ಪರ್ಧೆಯಲ್ಲಿ ದೆಹಲಿ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತ್ರಿಪುರಾ, ವೆಸ್ಟ್ ಬೆಂಗಾಲ್ ಆಯ್ಕೆಯಾಗಿತ್ತು. ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಶ್ರೀಮಾ ಕೆ.ಎಚ್. ಚತುರ್ಥ ಸ್ಥಾನ ಪಡೆದಿದ್ದರು.
ಶ್ರೀಮಾ ಕೆ.ಎಚ್. ಅವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕುಶಾಲಪ್ಪ ಗೌಡ ಹುದೇರಿ ಹಾಗೂ ಸುಜಿತಾ ದಂಪತಿ ಪುತ್ರಿ. ಅವರಿಗೆ ಶಿಕ್ಷಕರಾದ ಶಶಿಕಲಾ ಹಾಗೂ ಸಂತೋಷ್ ಮುಂಡಕಜೆ ತರಬೇತಿ ನೀಡಿದ್ದಾರೆ.
4ನೇ ತರಗತಿಯಿಂದ ಯೋಗಾಭ್ಯಾಸ ಮಾಡಿರುವ ಶ್ರೀಮಾ ಯೋಗಾಸನದಲ್ಲಿ ಒಂದು ಗಂಟೆ ಐದು ನಿಮಿಷ, 40 ಸೆಕೆಂಡ್‍ಒಂದೇ ಸ್ಥಿತಿಯಲ್ಲಿರುವ ಮೂಲಕ ಇಂಡಿಯಾ ಬುಕ್ ಆಫ್‍ರೆಕಾರ್ಡ್‍ನಲ್ಲಿ ದಾಖಲೆ ಮಾಡಿದ್ದಾರೆ. 2022 ರಲ್ಲಿ ಶಾಲಾ ಶಿಕ್ಷಣ ವತಿಯಿಂದ ನಡೆಸಿದ ಯೋಗ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ದಸರಾ ವತಿಯಿಂದ ನಡೆದ ಅಂತರ್ ಜಿಲ್ಲಾ ಮಟ್ಟದ ಯೋಗಾಸನದಲ್ಲಿ ಪ್ರಥಮ ಸ್ಥಾನ, 2022 ರಲ್ಲಿ ನಡೆಸಿದ ನ್ಯಾಷನಲ್ ಗೇಮ್ಸ್ ಆಫ್ ಇಂಡಿಯಾದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 2023 ರಲ್ಲಿ ನಡೆದ ಅಂತರ್ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮೈಸೂರಿನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
2023 ರಲ್ಲಿ ಶಾಲಾ ಶಿಕ್ಷಣ ವತಿಯಿಂದ ನಡೆದ ಯೋಗ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಯೋಗ ಕುಮಾರಿ ಪ್ರಶಸ್ತಿ ಪಡೆದಿದ್ದಾರೆ. ಜತೆಗೆ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ.