ಚಿಕ್ಕಮಗಳೂರು : ಅಪ್ರಾಪ್ತ ವಯಸ್ಸಿನ ಹಿಂದೂ ಯುವತಿ ಜತೆ ತಿರುಗಾಡುತ್ತಿದ್ದ ಉಜಿರೆ ಕಾಲೇಜಿನ ಡ್ಯಾನ್ಸ್ ಮಾಸ್ಟರ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ 7 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಡ್ಯಾನ್ಸ್ ಮಾಸ್ಟರ್ ನೃತ್ಯ ಕಲಿಸುವ ನೆಪದಲ್ಲಿ ಹಿಂದೂ ಯುವತಿಯರನ್ನು ಬುಟ್ಟಿಗೆ ಹಾಕಿಕೊಂಡು ಲವ್ ಜಿಹಾದ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ಹಲ್ಲೆ ಮಾಡಿದ್ದರು. ಚಿಕ್ಕಮಗಳೂರಿನ ಅಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಕೇಸ್ ದಾಖಲಾಗಿತ್ತು.
ಉಜಿರೆಯ ಖಾಸಗೀ ಕಾಲೇಜಿನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿರುವ ಮುಸ್ಲಿಂ ಯುವಕ ರೂಮನ್ ಎಂಬಾತ ಅಪ್ರಾಪ್ತ ವಯಸ್ಸಿನ ಯುವತಿ ಜೊತೆ ಸುತ್ತಾಡುತ್ತಿದ್ದ. ಯುವಕನ ಜೊತೆ ಅಪ್ರಾಪ್ತೆಯ ಫೋಟೋಗಳು ಹಾಗೂ ವೀಡಿಯೋಗಳು ವೈರಲ್ ಆಗಿದ್ದವು. ಈ ಹಿನ್ನಲೆಯಲ್ಲಿ ಬಜರಂಗದಳದ ಕಾರ್ಯಕರ್ತರು ಆತನ ಮೇಲೆ ಗುರುವಾರ ಹಲ್ಲೆ ನಡೆಸಿದ್ದರು. ಬಜರಂಗದಳ ಜಿಲ್ಲಾ ಸಂಚಾಲಕ ಸಿ.ಡಿ. ಶಿವಕುಮಾರ್, ಸ್ವರೂಪ್, ಕಾರ್ತಿಕ್, ಮಧು, ರಂಜಿತ್ ಮತ್ತು ಪರೀಕ್ಷಿತ್, ಪ್ರಜ್ವಲ್ ಎಂಬವರನ್ನು ಅಲ್ಲೂರು ಪೊಲೀಸರು ಬಂಧಿಸಿದ್ದಾರೆ.
ಅಲ್ಲೂರು ಸಮೀಪದ ಗಾಳಿಗಂಡಿಯ ಯುವಕ ರೂಮನ್, ತನ್ನನ್ನು ಬಜರಂಗದಳದ ಕಾರ್ಯಕರ್ತರು ಅಲ್ಲೂರಿಗೆ ಕರೆಸಿ ಬಳಿಕ ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದರು. ರೂಮನ್ ವಿರುದ್ಧ ಬಾಲಕಿಯ ಪೋಷಕರು ಅಲ್ಲೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.