ಪುತ್ತೂರು: ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ಹಣ ವಂಚನೆ ಮಾಡಿದ ಪ್ರಕರಣವನ್ನು ಭೇದಿಸಿರುವ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರಬಾಯಿ ಸಿ.ಆರ್. (23), ರಾಹುಲ್ ಕುಮಾರ್ ನಾಯ್ಕ (19) ಹಾಗೂ ಹಾಸನದ ಹಳಸಿನಹಳ್ಳಿಯ ಸೌಂದರ್ಯ ಎಂ.ಎಸ್. (21) ಬಂಧಿತ ಆರೋಪಿಗಳು. ಇದೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಾಧ್ಯಮದಲ್ಲಿ ದ.ಕ., ಉಡುಪಿ ಜಿಲ್ಲೆಗಳಲ್ಲಿ ಕಚೇರಿ ಕೆಲಸ ಖಾಲಿ ಇದೆ ಎಂದು ಜಾಹೀರಾತು ನೋಡಿ, ಜಾಹೀರಾತಿನಲ್ಲಿ ನಮೂದಿಸಿದ ಮೊಬೈಲ್ ನಂಬರ್ ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಬಳಿಕ ಉದ್ಯೋಗ ನೀಡುವುದಾಗಿ ಆರೋಪಿಗಳು ಆನ್‍ಲೈನ್ ಮೂಲಕ ಹಣ ಪಾವತಿ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಗೂಗಲ್ ಪೇ ಮೂಲಕ ಒಟ್ಟು 2.25 ಲಕ್ಷ ರೂ. ಆರೋಪಿಗಳ ಖಾತೆಗೆ ಜಮೆ ಆಗಿದೆ. ಇದೀಗ ಉದ್ಯೋಗ ನೀಡದೇ ವಂಚಿಸಿದ್ದಾರೆ ಎಂದು ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು.
ಪುತ್ತೂರು ಗ್ರಾಮಾಂತರ ಠಾಣಾ ಪಿ.ಎಸ್.ಐ ಜಂಬೂರಾಜ್ ಬಿ. ಮಹಾಜನ್ ನೇತೃತ್ವದಲ್ಲಿ ಎ.ಎಸ್.ಐ ಶ್ರೀಧರ್ ರೈ, ಸಿಬ್ಬಂದಿಗಳಾದ ಮಧು ಕೆ.ಎನ್., ಸತೀಶ್ ಎನ್., ಗಿರೀಶ ಕೆ., ಶಿವಪುತ್ರಮ್ಮ, ಹೆಚ್.ಜಿ. ಹಕೀಂ, ಗಣಕ ಯಂತ್ರ ವಿಭಾಗದ ದಿವಾಕರ್, ಸಂಪತ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.