ಪುತ್ತೂರು: ವಾರಾಂತ್ಯ ಚಟುವಟಿಕೆಯಂತಹ ಕಾರ್ಯಕ್ರಮದಿಂದ ಬದುಕು ರೂಪಿಸಿಕೊಳ್ಳುವ ಶಿಕ್ಷಣ ಸಿಗಲಿದೆ. ಉತ್ತಮ ಬದುಕಿಗೆ ಪೂರಕವಾದ ಅನುಭವಾತ್ಮಕ ಕಲಿಕೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಒಳಪಡಲಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ತಿಳಿಸಿದರು.
ರಾಜ್ಯ ಬಾಲಭವನ ಸೊಸೈಟಿ, ತಾಲೂಕು ಬಾಲಭವನ ಸೊಸೈಟಿ, ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಸಂಸಾರ ತಂಡ ಪುತ್ತೂರು ಇವುಗಳ ಸಹಯೋಗದಲ್ಲಿ ಪರ್ಲಡ್ಕ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ವಾರಾಂತ್ಯ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣವೆಂಬುದು ಬದುಕಿನಲ್ಲಿ ಉತ್ತಮವಾದ ಶಕ್ತಿಯಾಗಿದೆ. ಗಿಡಗಳು ಬೆಳೆಯಲು ನೀರು, ಗೊಬ್ಬರ ಉಣಿಸಿ ಆರೈಕೆ ಮಾಡುವಂತೆ ಜ್ಞಾನದ ಸಂಪಾದನೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಪೂರಕವಾಗಿದೆ. ವಿದ್ಯಾರ್ಥಿಗಳು ವಾರಾಂತ್ಯ ಚಟುವಟಿಕೆಯಲ್ಲಿ ಕಲಿತುಕೊಂಡಿರುವುದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದರೊಂದಿಗೆ ಪುಸ್ತಕ ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ವ್ಯಕ್ತಿಗಳ ಪುಸ್ತಕ ಓದುವುದರಿಂದ ಮಕ್ಕಳಲ್ಲಿ ನವ ಚೈತನ್ಯ ಮೂಡುತ್ತದೆ. ಬಾಲ್ಯದಲ್ಲಿ ಓದುವ ಹವ್ಯಾಸ ಬೆಳೆಸುವುದರಿಂದ ಮುಂದಿನ ಜೀವನ ಶೈಲಿಯೇ ಬದಲಾಗುತ್ತದೆ ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿ, ಪಾಠ ಓದುವುದು ಮಾತ್ರ ಕಲಿಕೆಯಲ್ಲ. ಇಂತಹ ಕಾರ್ಯಕ್ರಮಗಳು ಚಟುವಟಿಕೆಗಳೂ ಕಲಿಕೆಯ ಭಾಗವಾಗಿದೆ. ಇದೊಂದು ಜೀವನಾವಶ್ಯಕ ವಿದ್ಯೆಯಾಗಿದ್ದು, ಇದನ್ನು ದೈನಂದಿನ ಬದುಕಿನಲ್ಲಿ ಬೆಳೆಸಿಕೊಳ್ಳುವುದು ವಿದ್ಯಾರ್ಥಿಗಳ ಪರಿವರ್ತನೆಯ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಮತ್ತು ಧನಾತ್ಮಕ ಚಿಂತನೆಗೆ ಪ್ರೇರಣೆಯಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ವಾರಾಂತ್ಯ ಚಟುವಟಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಈ ಚಟುವಟಿಕೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಶಾಲಾ ಮುಖ್ಯಗುರು ವತ್ಸಲಾ ಬಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಸುಚಿತ್ರ ಕುಮಾರಿ, ಸಂಪನ್ಮೂಲ ವ್ಯಕ್ತಿಗಳಾದ ಪತ್ರಕರ್ತ ಸಂಶುದ್ದೀನ್ ಸಂಪ್ಯ ಮತ್ತು ರೋಹಿಣಿ ರಾಘವ ಉಪಸ್ಥಿತರಿದ್ದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಜೆ.ಎ. ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿಯರಾದ ಜಲಜಾಕ್ಷಿ ಸ್ವಾಗತಿಸಿ, ಉಮಾವತಿ ವಂದಿಸಿದರು. ಶಿಕ್ಷಕರಾದ ಯಶೋಧ ಪಿ ಮತ್ತು ಸುಂದರಿ ಬಿ ಸಹಕರಿಸಿದರು