ಪುತ್ತೂರು: ರೆಂಜಿಲಾಡಿ ಇಸ್ಲಾಮಿಕ್ ಸೆಂಟರ್ ವತಿಯಿಂದ ಬೃಹತ್ ಆಧ್ಯಾತ್ಮಿಕ ಸಂಗಮ “ನೂರೇ ಅಜ್ಮೀರ್’’ ಕಾರ್ಯಕ್ರಮ ಫೆ.10 ರಂದು ರೆಂಜಿಲಾಡಿ ಖ್ವಾಜಾ ನಗರದಲ್ಲಿ ನಡೆಯಲಿದೆ ಎಂದು ಕರ್ನಾಟಕ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಕ್ಷಾಂತರ ಜನರಿಗೆ ಶಾಂತಿ, ಸಮಾಧಾನ ಹಾಗೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವ ವಿಶ್ವಾಸಿಗಳ ಸಾಂತ್ವನದ ಭರವಸೆಯ ಬೆಳಕು, ವಿಶೇಷ ಆಧ್ಯಾತ್ಮಿಕತೆಯ ಚೈತನ್ಯ ನೀಡುವ ನಿಟ್ಟಿನಲ್ಲಿ ನೂರೇ ಅಜ್ಮೀರ್ ಕಾರ್ಯಕ್ರಮ ಪ್ರಸಿದ್ಧಿ ಪಡೆದಿದ್ದು, ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಫೆ.10 ರಂದು ವಾಗ್ಮಿ ರೆಂಜಿಲಾಡಿ ಹುಸೈನ್ ದಾರಿಮಿ ಅವರ ನೇತೃತ್ವದಲ್ಲಿ ಸಂಜೆ 7 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಉಸ್ತಾದ್ ಜಲಿಯುದ್ದೀನ್ ಫೈಝಿ ವಾಯಕ್ಕಾಡ್, ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್, ಎನ್. ಪಿ.ಯಂ ಝೈನುಲ್ ಅಬಿದೀನ್ ತಂಙಳ್ ಕುನ್ನುಂಗೈ, ಸಯ್ಯದ್ ಸಫ್ವಾನ್ ತಂಙಳ್ ಮೊದಲಾದ ಹಲವಾರು ಧಾರ್ಮಿಕ ಉಲಮಾಗಳು, ಸಾದಾತ್‍ಗಳು, ಸಾಮಾಜಿಕ, ವಿವಿಧ ಸಂಘ ಸಂಸ್ಥೆಗಳ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ ಕೆಎಸ್‍ಎಸ್‍ಎಫ್ ದ.ಕ.ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಕರೀಂ ದಾರಿಮಿ, ರೆಂಜಿಲಾಡಿ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಹಾಜಿ, ಸ್ವಾಗತ ಸಮಿತಿ ಚೆಯರ್ ಮ್ಯಾನ್ ಉಮರ್ ಸುಲ್ತಾನ್, ಜನರಲ್ ಕನ್ವಿನರ್ ಪಿ.ಕೆ.ಮುಹಮ್ಮದ್ ಉಪಸ್ಥಿತರಿದ್ದರು.