ಫೆ. 12ರಿಂದ 23ರವರೆಗೆ ವಿಧಾನಸಭೆ ಬಜೆಟ್ ಅಧಿವೇಶನ ನಡೆಯಲಿದ್ದು, ಫೆ. 16ರಂದು ಸಿಎಂ ಬಜೆಟ್ ಮಂಡಿಸುವರು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಫೆ. 12ಕ್ಕೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವರು. 15ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಸಾಗಲಿದೆ. ಫೆ. 16ಕ್ಕೆ ಬಜೆಟ್ ಇರಲಿದೆ. 23ರವರೆಗೆ ಬಜೆಟ್ ಕುರಿತ ಚರ್ಚೆಗಳು ನಡೆಯಲಿವೆ. ಅದಕ್ಕೂ ಪೂರ್ವದಲ್ಲಿ ಬಜೆಟ್ ಬಗ್ಗೆ ಮಾಹಿತಿ ನೀಡಲು ಎಲ್ಲ ಶಾಸಕರಿಗೆ ಫೆ. 9ರಂದು ಬೆಂಗಳೂರಿನ ಹೋಟೆಲ್ ಕ್ಯಾಪಿಟಲ್’ನಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ರಾಜ್ಯದ ವಿಧಾನಸಭೆಯನ್ನು ಜನರ ಹತ್ತಿರಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ವಿಧಾನಸೌಧ ರಾಜ್ಯದ ಎಲ್ಲ ಸಮುದಾಯಗಳ, ಪ್ರತಿಯೊಬ್ಬರ ವಿಧಾಸಭೆಯಾಗಬೇಕು ಎನ್ನುವ ಆಶಯ ಹೊಂದಲಾಗಿದೆ. ಜನರಿಂದ ಆಯ್ಕೆಯಾಗಿ ಬಂದ ಶಾಸಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗಿಯಾಗಬೇಕು ಎಂದರು.
ಯಾವುದೇ ಸರ್ಕಾರ ಇರಲಿ, ಎಲ್ಲರಿಗೂ ನ್ಯಾಯ ಕೊಡಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಆಶಯದಂತೆ ಕೆಲಸ ಮಾಡಬೇಕು. ನಾನು ಸಭಾಧ್ಯಕ್ಷನಾಗಿದ್ದು, ಆಡಳಿತ-ಪ್ರತಿಪಕ್ಷವೂ ಒಂದೇ ಆಗಿದೆ. ವಿವಿಧ ಕಾನೂನು, ಜನಪರ ಯೋಜನೆಗಳನ್ನು ರೂಪಿಸಲು ಉತ್ತಮ ವಾತಾವರಣ ರೂಪಿಸುವ ಕೆಲಸ ಮಾಡುತ್ತೇನೆ ಎಂದರು.