ಪುತ್ತೂರು: ಮುಂದಿನ ಮೂರು ದಿನಗಳೊಳಗೆ ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಬೇಕು. ಆದರೆ ಬಿಜೆಪಿ ಸೇರ್ಪಡೆ ಕುರಿತು ಯಾವುದೇ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಹೀಗೆಂದು ಹೇಳಿದ್ದಾರೆ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ.
ಪುತ್ತಿಲ ಪರಿವಾರ ವತಿಯಿಂದ ನಡೆದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಅವರು ರಾಷ್ಟ್ರೀಯ ಪಕ್ಷವಾದ ಬಿಜೆಪಿ ನಾಯಕರಿಗೆ ಸವಾಲೆಸೆದಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಹಿಂದೂಗಳ ನೋವಿಗೆ ರಾತ್ರಿ ಹಗಲೆನ್ನದೆ ಸ್ಪಂದಿಸುತ್ತಿರುವ ಅರುಣ್ ಕುಮಾರ್ ಪುತ್ತಿಲರ ನಾಯಕತ್ವವಿಲ್ಲದೆ ಪುತ್ತೂರಿನಲ್ಲಿ ಯಾರಿಗೂ ತಾಕತ್ತಿಲ್ಲ. ಪ್ರಸ್ತುತ ಬಿಜೆಪಿಗೆ ಪುತ್ತಿಲ ಪರಿವಾರವನ್ನು ಒಳಗೆ ಕರೆದುಕೊಳ್ಳುವ ವಿಧಿಯೇ ಇಲ್ಲ ಎಂದ ಅವರು, ಅರುಣ್ ಕುಮಾರ್ ಪುತ್ತಿಲರನ್ನು ಬಿಜೆಪಿಗೆ ಸೇರಿಸಲು ಬಿಜೆಪಿ ಹೈಕಮಾಂಡ್ ಉತ್ಸುಕವಾಗಿದೆ. ಮುಂದಿನ ಮೂರು ದಿನಗಳಲ್ಲಿ ಸರಿ ಮಾಡದಿದ್ದಲ್ಲಿ ಪುತ್ತಿಲ ಪರಿವಾರ ಸಾಮಾಜಿಕ ಸಂಘಟನೆಯಾಗಿ ಹುಟ್ಟಿದ್ದು ಹೌದಾದರೂ ಮುಂದೆ ರಾಜಕೀಯ ಕ್ಷೇತ್ರಕ್ಕೆ ಧುಮುಕಲು ಟೊಂಕಕಟ್ಟಿ ಕೊಳ್ಳುತ್ತೇವೆ ಸಂದೇಶ ರವಾನಿಸಿದ ಅವರು, ಅನ್ಯಾಯದ ಪರಂಪರೆ ಪುತ್ತೂರಿಗೆ ಕೊನೆಗೊಳ್ಳಬೇಕು. ಸಾಮಾನ್ಯ ಕಾರ್ಯಕರ್ತರೆಂದು ಹೇಳಿ ಅನ್ಯಾಯ ಮಾಡುವುದು ಬೇಡ ಎಂದು ಹೇಳಿದರು.
ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಬೆರಳೆಣಿಕೆ ಮಂದಿಯ ವಿರೋಧವಿದೆ. ಆದರೆ ಎಲ್ಲಾ ಹಿತಾಸಕ್ತಿಗಳನ್ನು ಬದಿಗಿಟ್ಟು ಪುತ್ತಿಲರನ್ನು ಸೇರ್ಪಡೆಗೊಳಿಸುವಲ್ಲಿ ಬೇರೆ ವಿಧಿಯೇ ಇಲ್ಲ ಎಂದರು.
ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಬಳಿಕ ಪುತ್ತಿಲ ಪರಿವಾರದಿಂದ ರಚಿತಗೊಂಡ 224 ಬೂತ್ ಗಳ ಕಾರ್ಯಕರ್ತರು ಪಾಲ್ಗೊಂಡು ಮನ್ನಣೆ ನೀಡಿದ್ದೀರಿ. ಜಿಲ್ಲೆಯಲ್ಲಿ ಕಾರ್ಯಕರ್ತರ ಭಾವನೆಗೆ ಬೆಲೆ ಕೊಡುವ ನಿಟ್ಟಿನಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರ ಭಾವನೆಗೆ ನೋವು ನೀಡುವ ಪ್ರಶ್ನೆಯೇ ಇಲ್ಲ. ಮುಂದಿನ ಯೋಜನೆಗೆ ಕಟಿಬದ್ಧರಾಗಿ ಕೆಲಸ ಕಾರ್ಯ ಮಾಡುತ್ತೇವೆ ಎಂದರು.
ವೇದಿಕೆಯಲ್ಲಿ ಪುತ್ತಿಲ ಪರಿವಾರದ ಸಲಹೆಗಾರ ಶಶಾಂಕ ಕೊಟೇಚಾ, ಅಧ್ಯಕ್ಷ ಪ್ರಸನ್ನ ಮಾರ್ತ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಕಾನೂನು ಸಲಹೆಗಾರ ರಾಜೇಶ್ ಆರ್ಲಪದವು, ನಗರ ಅಧ್ಯಕ್ಷ ಅನಿಲ್ ತೆಂಕಿಲ ಪಸ್ಥಿತರಿದ್ದರು. ರವಿ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು.