ಪುತ್ತೂರು: ಭಗವಂತ ಕೈಗೊಳ್ಳುವ ಕೆಲಸದಲ್ಲಿ ನಾವು ಕೈಜೋಡಿಸಿದರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಪ್ರತಿಯೊಂದು ಮನೆಯಲ್ಲೂ ಗೋಸಾಕಣೆ, ಗೋವಿನ ಆರಾಧನೆ ಮಾಡಬೇಕಾದ ಅಗತ್ಯವಿದೆ ಎಂದು ಉಡುಪಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ, ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗದ ನೇತೃತ್ವದಲ್ಲಿ ಮೊಟ್ಟೆತ್ತಡ್ಕ ಎನ್.ಆರ್.ಸಿ.ಸಿ. ಸಮೀಪದ ಸಂಪ್ಯದಮೂಲೆಯ ಗೋವಿಹಾರ ಧಾಮದಲ್ಲಿ ಎರಡು ದಿನಗಳ ಕಾಲ ನಡೆದ ಗೋಲೋಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಅಧಿಕಾರದ ಕುರ್ಚಿ ಪಡೆಯಲು ರಾಮ ಬೇಕು. ಅಧಿಕಾರ ಪಡೆದ ಬಳಿಕ ರಾವಣನ ವರ್ತನೆ ತೋರುವ ಹಂದಿಗಳು ಬೇಕಾದಷ್ಟಿವೆ. ಅಂತಹವುಗಳನ್ನು ತೊಲಗಿಸಲು ನಾವು ಕಟಿಬದ್ಧರಾಗಬೇಕು ಎಂದ ಅವರು, ಮನೆ ಮಂದಿಗೆ ಬರುವ ಆಪತ್ತನ್ನು ಆಕಳುಗಳು ಪಡೆದುಕೊಳ್ಳುತ್ತವೆ. ಅದಕ್ಕಾಗಿ ಅಕ್ಕಪಕ್ಕದ ದೇಶದಿಂದ ನಮ್ಮ ದೇಶಕ್ಕೆ ಬರುವ ಆಪತ್ತುಗಳಿಂದ ಪಾರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಆಕಗಳುಗಳನ್ನು ಸಾಕಬೇಕು. ಆಕಳ ಸೇವೆ ಮಾಡಬೇಕು ಎಂದರು.
ಯಾವುದೇ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಯಶಸ್ವಿಯಾಗುವುದಕ್ಕೆ ಚಹಾ ಮಾರುತ್ತಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿ ಉತ್ತಮ ಉದಾಹರಣೆ. ಮಹಿಳೆ, ಆಕಳುಗಳ ರಕ್ಷಣೆಗೆ ರಾಮಮಂದಿರ ನಿರ್ಮಾಣವನ್ನು ಅವರು ಸಾಕಾರಗೊಳಿಸಿದ್ದಾರೆ. ಮುಂದೆ ಗೋವುಗಳ ಸಾಕಣೆ ಪ್ರತಿಯೊಬ್ಬನ ಮನೆಯಲ್ಲೂ ನಡೆಯಬೇಕು ಎಂದು ಹೇಳಿದರು.
ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದು, ಗೋವಿಹಾರ ಧಾಮದಲ್ಲಿ ನಿರ್ಮಾಣವಾಗಲಿರುವ ಪಶುಪತಿನಾಥ ಭಜನಾ ಮಂದಿರದ ನೀಲನಕಾಶೆಯನ್ನು ಅನಾವರಣಗೊಳಿಸಿದರು. ಬಳಿಕ ಧಾರ್ಮಿಕ ಶಿಕ್ಷಣ ನಿರ್ವಾಹಕರಿಗೆ ಮಂತ್ರಾಕ್ಷತೆ ನೀಡಿದರು.
ಮೊದಲಿಗೆ ಸ್ವಾಮೀಜಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕಲಶಹೊತ್ತ ಮಹಿಳೆಯರು ವೇದಿಕೆಗೆ ಕರೆತಂದರು. ಬಳಿಕ ಗೌರವಾರ್ಪಣೆ ನಡೆಯಿತು.
ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ವೀಣಾ ಬಿ.ಕೆ., ಸುಧಾ ಎಸ್.ರಾವ್, ಬಜರಂಗದಳದ ಮುರಳೀಕೃಷ್ಣ ಹಸಂತಡ್ಕ ಉಪಸ್ಥಿತರಿದ್ದರು.
ಉಪನ್ಯಾಸಕ ರಾಜೇಶ್ ಬೆಜ್ಜಂಗಳ, ದಾಮೋದರ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು.