ಬಿ.ಸಿ ರೋಡ್ : ಅನೇಕ ಚಮತ್ಕಾರಿಕ ಸಂಗತಿಗಳುಳ್ಳ ನಮ್ಮ ನೆಲಮೂಲದ ಸಂಸ್ಕೃತಿ ಅದೆಷ್ಟೋ ವರ್ಷಗಳ ಇತಿಹಾಸವನ್ನು ಹೊಂದಿದೆ. ನಮ್ಮ ಪೂರ್ವಜರ ಪಾಂಡಿತ್ಯ ಹಾಗೂ ಬುದ್ಧಿಮತ್ತೆಯಿಂದ ಸಮಾಜಕ್ಕೆ ಹಲವಾರು ಕೊಡುಗೆಗಳು ಸಂದಿದೆ. ಯಾವ ಕಾಲಕ್ಕೂ ಕ್ಷೇಮಕರವಾದ ನಮ್ಮ ಸಾಂಪ್ರದಾಯಿಕ ಆಚರಣೆಗಳ ಮಹತ್ವವನ್ನರಿತು ಉಳಿಸಿಕೊಂಡು ಮುಂದಿನ ತಲೆಮಾರಿಗೂ ದಾಟಿಸಬೇಕು ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಹಾಗೂ ಉಪನ್ಯಾಸಕ ತುಕಾರಾಮ ಪೂಜಾರಿ ಹೇಳಿದರು.
ಅವರು ಬಿ.ಸಿ ರೋಡ್ ಸಂಜಯಗಿರಿ, ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ತುಳು ವಸ್ತು ಸಂಗ್ರಹಾಲಯ ಹಾಗೂ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಭೇಟಿ ಸಂದರ್ಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರಮೋದ್ ಎಮ್.ಜಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ನಾಯಕ್ ವಂದಿಸಿದರು.