ಬೆಳ್ಳಾರೆ: ಚಿನ್ನದ ಸರ ಸುಲಿಗೆ ಮಾಡಿದ ಇಬ್ಬರು ಅಪರಿಚಿತ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳ ನಿವಾಸಿ ಚಂದ್ರಮೋಹನ್ (42) ಹಾಗೂ ನರಿಮೊಗರು ನಿವಾಸಿ ನೌಶಾದ್ ಬಿ.ಎ. (36) ಬಂಧಿತ ಆರೋಪಿಗಳು
ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಜ.11 ರಂದು ಇಬ್ಬರು ಅಪರಿಚಿತರು ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಎಳೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಶೀಘ್ರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 80 ಸಾವಿರ ರೂ. ಮೌಲ್ಯದ ಚಿನ್ನದ ಸರ ಮತ್ತು ಒಂದು ಲಕ್ಷ ರೂ. ಮೌಲ್ಯದ ಸ್ಕೂಟರನ್ನು ಸ್ವಾಧೀನಕ್ಕೆ ಪಡೆದಿದ್ದಾರೆ.
ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಕೆ.ಎಸ್, ರಾಜೇಂದ್ರ ಅವರ ಮುಂದಾಳುತ್ವದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಅರುಣ್ ನಾಗೇಗೌಡ ನೇತೃತ್ವದಲ್ಲಿ, ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ಬೆಳ್ಳಾರೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ. ಹಾಗೂ ಅಶೋಕ್ ಸಿ.ಎಂ. ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿತ್ತು.