ಮಂಗಳೂರು: ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಹಾಗೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಅಂಚೆ ಪತ್ರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇನ್ನು ಹತ್ತೇ ದಿನದಲ್ಲಿ 10 ಸಾವಿರ ಅಂಚೆ ಪತ್ರ ಅಭಿಯಾನ ತಲುಪುವ ಗುರಿ ಹೊಂದಿದ್ದು, ಹೋರಾಟಕ್ಕೆ ಹೊಸ ಧಿಕ್ಕು ತೋರಿಸುವ ಸೂಚನೆ ಇದೆ.
ಜ. 29ರಂದು ಅಂಚೆ ಪತ್ರ ಅಭಿಯಾನಕ್ಕೆ ಚಾಲನೆ ನೀಡಿದ್ದು, ತುಳು ರಾಜ್ಯದ ಬಾಹುಳ್ಯ ಹೊಂದಿರುವ ಕೇರಳದ ಕಾಸರಗೋಡನ್ನು ಸೇರಿಸಿಕೊಂಡೇ ಅಭಿಯಾನ ಆರಂಭಿಸಿರುವುದು ವಿಶೇಷ. ಆದ್ದರಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇರಳ ಸಿಎಂ ಪಿಣರಾಯ ವಿಜಯನ್ ಅವರಿಗೆ ನೋಂದಾಯಿತ ಅಂಚೆ ಪತ್ರವನ್ನು ಕಳುಹಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಇಷ್ಟೇ ಅಲ್ಲ, ಜಿಲ್ಲೆಯ ಸಾಹಿತಿಗಳು, ಜನಪ್ರತಿನಿಧಿಗಳು, ಕಲಾವಿದರ ಸಹಿತ ಗಣ್ಯರ ನಿಯೋಗವೂ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ.
ತುಳುವಿನ ಮಾನ್ಯತೆಗಾಗಿ ಇತ್ತೀಚೆಗೆ ನಡೆದ ಬೆಂಗಳೂರು ಕಂಬಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಮಾಡಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಬಳಿ ಚರ್ಚಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ದರು. 2009ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿಯೂ ಈ ವಿಷಯ ಪ್ರಸ್ತಾಪವಾಗಿತ್ತು. ಆಗಿನ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಭರವಸೆ ನೀಡಿದ್ದರು. ಆದರೆ ಇದುವರೆಗೂ ಈಡೇರಿಲ್ಲ. ಆದ್ದರಿಂದ ಮತ್ತೊಮ್ಮೆ ಅಂಚೆ ಪತ್ರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ದೇಶದ 22 ಭಾಷೆಗಳು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಂಡಿದ್ದು, ತುಳು, ಕೊಡವ ಸೇರಿ ಇನ್ನೂ 44 ಭಾಷೆಗಳಿಂದ ಬೇಡಿಕೆ ಇದೆ. ಕೆಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯ ಭಾಷೆ ಇದ್ದು, ಅದೇ ರೀತಿ ತುಳುವನ್ನೂ ಪರಿಗಣಿಸಬೇಕು ಎಂಬುದು ತುಳು ನಾಡಿಗರ ಆಗ್ರಹ.