ಮಂಗಳೂರು: ಮುಂದಿನ ಲೋಕಸಭಾ ಚುನಾವಣೆಯ ತಾಂತ್ರಿಕ ಘೊಷಣೆಯಾಗಿದ್ದು, ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಮಂಗಳವಾರ ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ಕುಂಪಲ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಲೋಕಸಭೆ ಚುನಾವಣೆ ಕುರಿತು ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಬಿಜೆಪಿ ಪರ ವಾತಾವರಣ ಉಂಟಾಗಿದೆ. ಇದಕ್ಕೆ ಕಳೆದ ಕಾರ್ಯಕಾರಿಣಿ ಸಭೆಯಲ್ಲಿ ಶೇ.98 ರಷ್ಟು ಮಂದಿ ಕಾರ್ಯಕಾರಿಣಿ ಸದಸ್ಯರು ಪಾಲ್ಗೊಂಡಿರುವುದು ಉದಾಹರಣೆಯಾಗಿದೆ. ಅದು ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿ ಯಶಸ್ವಿಯಾಗಿ ನಡೆದಿದೆ ಎಂದರು.
ನನ್ನ ತಂದೆಯವರು ಹೇಳಿದಂತೆ ಪಕ್ಷದವರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ರಾಜ್ಯಾಧ್ಯಕ್ಷ ನೆಲೆಯಲ್ಲಿ ಜವಾಬ್ದಾರಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ 28 ಜಯಗಳಿಸಬೇಕಾಗಿದ್ದು,. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಾದ ಅಗತ್ಯವಿದೆ ಎಂದ ಅವರು, ಯಾವ ಸಂದರ್ಭದಲ್ಲೂ ಲೋಕಸಭಾ ಚುನಾವಣೆಯ ಘೋಷಣೆಯಾಗಬಹುದು. ಪಕ್ಷವನ್ನು ಗೆಲ್ಲಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಮುಂದಿನ ಚುನಾವಣೆ ನರೇಂದ್ರ ಮೋದಿ ಪ್ರಧಾನಿ ಮಾತ್ರ ಆಗುವುದಲ್ಲ, ಅವರು ಭಾರತದ ಭವಿಷ್ಯ ರೂಪಿಸಬೇಕಾದ ಹಿನ್ನಲೆಯಲ್ಲಿ ಮಹತ್ವದ ಚುನಾವಣೆಯಾಗಲಿದೆ ಎಂದರು.
ಭ್ರಷ್ಟಾಚಾರದ ಕುರಿತು ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್ ಸರಕಾರದ್ದು ಇಂದು ಬೆಂಗಳೂರಿನಲ್ಲಿ ಸ್ಕ್ವಾರ್ ಫೀಟ್ ಮಂತ್ರಿ ಎಂಬ ಹಿನ್ನಲೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಜತೆಗೆ ದಲಿತರ ಬಗ್ಗೆ ಮಾತನಾಡುವ ಕಾಂಗ್ರೆಸ್ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ, ಗೆದ್ದ ಅಭ್ಯರ್ಥಿಗೆ ಭಾರತರತ್ನ ನೀಡುವ ಕೆಲಸ ಮಾಡುವ ಮೂಲಕ ಅವಮಾನ ಮಾಡಿದ್ದಾರೆ. ಅದೇ ನರೇಂದ್ರ ಮೋದಿಯವರು ಲಂಡನ್ ನಲ್ಲಿ ಅಂಬೇಡ್ಕರ್ ಓದಿರುವ ಕೊಠಡಿಯನ್ನು ಪಡೆದು ಅಭಿವೃದ್ಧಿ ಮಾಡಿದ್ದಾರೆ. ಇದೀಗ ಪಂಚತೀರ್ಥ ಕ್ಷೇತ್ರ ಅಭಿವೃದ್ಧಿ ಮಾಡುತ್ತಿರುವ ನರೇಂದ್ರ ಮೋದಿ ಕುರಿತು ಕಾಂಗ್ರೆಸ್ ನವರಿಗೆ ಮಾತನಾಡುವ ನೈತಿಕತೆ ಇಲ್ಲ ಎ<ಂದ ಅವರು, ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದು, ಕಾಂಗ್ರೆಸ್ ರೈತರತ್ತ ಮುಖ ಮಾಡುತ್ತಿಲ್ಲ. ಬಡವರು, ರೈತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ. ರಾಜ್ಯದಲ್ಲಿರುವುದು ರೈತ, ದಲಿತ, ಬಡವರ ವಿರೋಧಿ ಸರಕಾರ. ಮುಖ್ಯಮಂತ್ರಿ ಅಲ್ಕಸಂಖ್ಯಾತರ ಹಿಂದೆ ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿವಿಜಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ನೂತನ ಅಧ್ಯಕ್ಷ ಸತೀಶ್ ಕುಂಪಲ, ಶರಣ್ , ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ, ಲೋಕಸಭಾ ಚುನಾವಣೆ ಸಂಚಾಲಕ ನಿತಿನ್ ಕುಮಾರ್, ಶಾಸಕ ಹರೀಶ್ ಪೂಂಜಾ, ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹಪ್ರಭಾರಿಗಳಾದ ಗೋಪಾಲಕೃಷ್ಣ ಹೇರಳೆ, ಭಾರತೇಶ್, ರಾಜೇಶ್ ಕಾವೇರಿ, ಹಿರಿಯ ಪ್ರಕೋಷ್ಠ ಸಂಚಾಲಕ ಪ್ರತಾಪಸಿಂಹ ನಾಯಕ್, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ರಾಜ್ಯ ಮಾಧ್ಯಮ ಸಹಸಂಚಾಲಕ ಪ್ರಶಾಂತ್ ಕೆಡೆಂಜಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ
ರಾಮದಾಸ್ ಬಂಟ್ವಾಳ ಸ್ವಾಗತಿಸಿದರು.