ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ನೂತನ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೆಂದು ಅಂತಿಮಗೊಂಡ ಮೂರು ಮೂರ್ತಿಗಳಲ್ಲೊಂದನ್ನು ರಾಜ್ಯಕ್ಕೆ ತರಲು ರಾಘವೇಶ್ವರ ಶ್ರೀ ಉತ್ಸಾಹಿತರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಶಿಲ್ಪಿ ಗಣೇಶ್ ಭಟ್ ಅವರು ರಚಿಸಿದ ವಿಗ್ರಹ ಇದಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಿದೆ. ಉಳಿದೆರಡು ವಿಗ್ರಹಗಳನ್ನು ಅಯೋಧ್ಯೆಯಲ್ಲಿ ವೀಕ್ಷಣೆಗೆ ಇಡಲಾಗಿದೆ. ಇದನ್ನು ವೀಕ್ಷಿಸಿದ ಬಳಿಕ ರಾಘವೇಶ್ವರ ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಚಿಸಿದ ಶ್ರೀರಾಮನ ವಿಗ್ರಹವನ್ನು ರಾಜ್ಯಕ್ಕೆ ತಂದು ಪ್ರತಿಷ್ಠಾಪಿಸಬೇಕೆಂಬ ಅಭಿಲಾಷೆ ನಮಗೂ ಇದೆ. ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲೇ ಶಿಲ್ಪಿಯ ಬಳಿ ನಮ್ಮ ಮನದಾಳವನ್ನು ಹಂಚಿಕೊಂಡಿದ್ದೇವೆ. ಹಾಗಾದಲ್ಲಿ ಬಹಳ ಸಂತೋಷ ಎಂದು ಗಣೇಶ್ ಭಟ್ ಅವರೂ ಮನದುಂಬಿ ಹೇಳಿದ್ದಾರೆ. ಇನ್ನು ಒಂದೆರಡು ದಿನಗಳಲ್ಲೇ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಟ್ರಸ್ಟ್‌ಗೆ ಈ ಕುರಿತಾಗಿ ಪತ್ರ ಬರೆಯುತ್ತೇವೆ ಎಂದು ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ವಿಗ್ರಹವನ್ನು ನೋಡುತ್ತಿದ್ದಂತೆ ಮನಸ್ಸು ಪ್ರಫುಲ್ಲವಾಯಿತು. ಅಂಥ ಅಪೂರ್ವವಾದ ಕೆತ್ತನೆಯದು. ವಿಗ್ರಹ ಬಹಳ ದೈವಿಕವಾಗಿದೆ. ಒಂದೊಂದು ಭಾಗವೂ ಅದ್ಭುತ ಕಲೆಗಾರಿಕೆಯಿಂದ ಕೂಡಿದೆ. ಒಂದು ವೇಳೆ ರಾಮಜನ್ಮಭೂಮಿ ಟ್ರಸ್ಟ್‌ನವರು ಅನುಮತಿ ನೀಡಿದರೆ ನಿಸ್ಸಂಶಯವಾಗಿ ವಿಗ್ರಹವನ್ನು ತರುತ್ತೇವೆ. ಇದಕ್ಕಾಗಿ ಒಂದೆರಡು ದಿನಗಳಲ್ಲಿ ಅಧಿಕೃತ ಕೋರಿಕೆ ಪತ್ರವನ್ನು ಕಳುಹಿಸುತ್ತೇವೆ. ಎಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎನ್ನುವ ವಿಚಾರವೂ ಇದೆ. ಗೋಕರ್ಣ ಮಠದಲ್ಲಿ ಪ್ರತಿಷ್ಠಾಪಿಸಬೇಕು ಎಂಬ ಚಿಂತನೆ ಇದೆ. ಆದರೆ ಅದರ ನಿರ್ಧಾರವನ್ನು ಬಳಿಕ ತೆಗೆದುಕೊಳ‍್ಳಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗಣೇಶ್ ಭಟ್, ತಮ್ಮ ಶಿಲ್ಪ ಶಾಸ್ತ್ರೋಕ್ತವಾಗಿ ಸಿದ್ಧವಾದದ್ದು. ಪೂಜಾರ್ಹವಾದ ರಾಮನ ವಿಗ್ರಹ ಅದು. ಯಾವುದಾದರೂ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿ ನಿತ್ಯಪೂಜೆಗೆ ಒಳಪಡಲಿ, ಕರ್ನಾಟಕದಲ್ಲೇ ಆದರೆ ಸಂತೋಷ ಎಂದಿದ್ದಾರೆ.