ಸುಳ್ಯ: ಪ್ರಧಾನಿ ನರೇಂದ್ರ ಮೋದಿಯವರ ವಿಶಿಷ್ಟ ಕಾರ್ಯಕ್ರಮ ‘ಪರೀಕ್ಷಾ ಪೇ ಚರ್ಚಾ-7’ ದಲ್ಲಿ ವೈಜ್ಞಾನಿಕ ಮಾದರಿ ಪ್ರದರ್ಶಿಸಲು ಸುಳ್ಯದ ಅಚಲ್ ಬಿಳಿನೆಲೆ ಆಯ್ಕೆಯಾಗಿದ್ದಾರೆ.
ಅಚಲ್ ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ.
ದೇಶದ 600ಕ್ಕೂ ಹೆಚ್ಚು ಜವಾಹರ್ ನವೋದಯ ವಿದ್ಯಾಲಯಗಳ ಪೈಕಿ ಎಂಟು ವಿದ್ಯಾಲಯಗಳಿಗೆ ಈ ಅವಕಾಶ ದೊರಕಿದ್ದು, ಇದರಲ್ಲಿ ಭಾಗವಹಿಸಲು ನವೋದಯ ವಿದ್ಯಾಲಯದ ಹೈದರಾಬಾದ್ ರೀಜನ್ ನ್ನು ಪ್ರತಿನಿಧಿಸುತ್ತಿರುವ ಅಚಲ್ ಬಿಳಿನೆಲೆಯವರು ಜ. 22ರಂದು ದೆಹಲಿ ತೆರಳಿದ್ದಾರೆ.
ವಿದ್ಯಾರ್ಥಿಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡುವ ಕಾರ್ಯಕ್ರಮಗಳಲ್ಲಿ ‘ಪರೀಕ್ಷಾ ಪೇ ಚರ್ಚಾ-7’ ಒಂದಾಗಿದ್ದು, ಜ. 29 ರಂದು ನವದೆಹಲಿಯ ಭಾರತ್ ಮಂಟಪ (2023ರ G 20 ಶೃಂಗ ಸಭೆ ನಡೆದ ಸ್ಥಳ) ದಲ್ಲಿ ನಡೆಯುವ “ಪರೀಕ್ಷಾ ಪೇ ಚರ್ಚಾ -7″ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರೊಂದಿಗೆ ದೇಶದ ಆಯ್ದ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ನಿರ್ವಹಣೆಯ ಸಂವಾದದಲ್ಲಿ ಭಾಗವಹಿಸಲಿದ್ದು, ಇದೇ ಸಂದರ್ಭದಲ್ಲಿ “ಚಂದ್ರಯಾನ -3″ ಇದರ ಕಾರ್ಯವೈಖರಿಯನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಯಾರಿಸಿದ ವೈಜ್ಞಾನಿಕ ಮಾದರಿಯನ್ನು ಅಚಲ್ ಬಿಳಿನೆಲೆ ಪ್ರಧಾನಿಯವರ ಮುಂದೆ ಪ್ರದರ್ಶಿಸಿ ವಿವರಿಸಲಿದ್ದಾರೆ.
ಅಚಲ್ ಅವರು ಕರಾಟೆಯಲ್ಲಿ ಬ್ಲಾಕ್ ಬೆಲ್ಟ್, ಕೀಬೋರ್ಡ್ ನಲ್ಲಿ ಜೂನಿಯರ್ ಮುಗಿಸಿದ್ದು, ಬಿಳಿನೆಲೆಯ ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರುಗಳಾದ ಚಂದ್ರಶೇಖರ ಬಿಳಿನೆಲೆ ಮತ್ತು ಡಾ. ಅನುರಾಧಾ ಕುರುಂಜಿಯರ ಪುತ್ರ. ರೋಟರಿ ಆಂಗ್ಲ ಮಾದ್ಯಮ ಶಾಲೆಯ ಹಿರಿಯ ವಿದ್ಯಾರ್ಥಿ.