ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿಯವರನ್ನು ಅಯೋಧ್ಯೆ ಶ್ರೀರಾಮ ಮಂದಿರದ ಗರ್ಭ ಗುಡಿ ಪ್ರವೇಶಿಸಲು ಬಿಡಬಾರದಿತ್ತು. ಹೀಗೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಮಾಜಿ ಸಿಎಂ. ವೀರಪ್ಪ ಮೊಯಿಲಿ.
ಕಾಂಗ್ರೆಸ್ ಪಕ್ಷದ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರತಿಭಟನೆಯೊಂದಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‍ನವರು ರಾಮಮಂದಿರ ವಿಚಾರದಲ್ಲಿ ವಿರೋಧವನ್ನು ಇನ್ನೂ ಬಿಟ್ಟಿಲ್ಲ ಎಂದು ಸಾಬೀತು ಮಾಡಿದ್ದಾರೆ.
ರಾಮ ಮಂದಿರ ಅಪೂರ್ಣ ರಾಮ ಮಂದಿರವಾಗಿದ್ದು, ಕೇವಲ ಶ್ರೀರಾಮ ಪ್ರಾಣ ಪ್ರತಿಷ್ಠೆ ಮಾಡಿದರೆ ಸಾಲದು. ಅಲ್ಲಿ ರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ವಿಗ್ರಹಗಳು ಇರಬೇಕು ಎಂಬುದು ಅವರ ವಾದ. ಇವೆಲ್ಲಾ ಇದ್ದಾಗಲೇ ರಾಮ ಮಂದಿರ ಪೂರ್ಣ ಆಗೋದು ಎಂದು ಅವರು ಹೇಳಿದ್ದಾರೆ.
ನರೇಂದ್ರ ಮೋದಿಯವರು ಶ್ರೀ ರಾಮ ಲಲ್ಲಾನ ಪ್ರತಿಷ್ಠಾಪನೆ ಮಾಡಿದ್ದು ಎಷ್ಟು ಸರಿ, ಅವರಿಂದ ದೇವಾಲಯಕ್ಕೆ ಎಷ್ಟು ಪಾವಿತ್ರ್ಯತೆ ಬರಲಿದೆ ಎಂದು ಪ್ರಶ್ನಿಸಿರುವ ಅವರು, ಮೋದಿಯವರು ಗರ್ಭಗುಡಿ ಪ್ರವೇಶಿಸಿದ್ದೇ ತಪ್ಪು. ನಿಜವಾದ ಸ್ವಾಮೀಜಿಗಳು, ಬ್ರಾಹ್ಮಣರು ಆಗಿದ್ರೆ ನರೇಂದ್ರ ಮೋದಿಯವರನ್ನು ಗರ್ಭಗುಡಿಗೆ ಪ್ರವೇಶಿಸಲು ಬಿಡಬಾರದಿತ್ತು ಎಂಬ ಹೇಳಿಕೆಗಳನ್ನು ನೀಡಿದ್ದಾರೆ.