ಪುತ್ತೂರು: ಭಜನೆ, ಭಜಕರ ನಿಂದಿಸಿ ಹಿಂದೂ ಸಮಾಜದ, ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರನ್ನು ಅಮಾನತುಗೊಳಿಸಿ ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿದ್ದಾರೆ.
ಭಜನೆ ಹಾಗೂ ಭಜಕರನ್ನು ಸಾಮಾಜಿಕ ಜಾಲತಾಣದ ನಿಂದಿಸಿ ಅವಮಾನಿಸಿದ್ದ ಸಂಜೀವ ಪೂಜಾರಿ, ಈ ಹಿಂದೆಯೂ ಹಲವಾರು ಬಾರಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದರು. ಕಡಬ ತಾಲೂಕಿನ ಹಿರೇಬಂಡಾಡಿ ಗ್ರಾಮಸಭೆಯಲ್ಲಿ ರೈತರ ಪ್ರಶ್ನೆಗೆ ಉಡಾಫೆಯಾಗಿ ಉತ್ತರಿಸಿದ್ದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿ, ಇಲಾಖೆಗೂ ದೂರು ನೀಡಲಾಗಿತ್ತು.
ಇದಾಗಿ ಕೆಲವೇ ದಿನಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಭಜನೆ ಕಾರ್ಯಕ್ರಮದ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರು. ಅಲ್ಲದೇ, ಭಜನೆ ಮಾಡುವವರನ್ನು ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿದೆ ಎಂದಿದ್ದರು. ಇದು ಭಾರೀ ಟೀಕೆಗೆ ತುತ್ತಾಗಿ, ಹಿಂದೂ ಪರ ಸಂಘಟನೆಗಳು ಪುತ್ತೂರು ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗ ಒಂದಿಡೀ ದಿನ ಪ್ರತಿಭಟನೆ ನಡೆಸಿದ್ದರು. ಕೊನೆಗೆ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸಿ, ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದೆಗೆದುಕೊಳ್ಳಲಾಗಿತ್ತು. ಬಳಿಕವೂ ಕ್ರಮ ಜಾರಿಯಾಗಿಲ್ಲ ಎಂದು ಆರೋಪಿಸಿ, ಹಿಂದೂ ಪರ ಸಂಘಟನೆಗಳು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದವು. ಇದೀಗ ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಸಂಜೀವ ಪೂಜಾರಿ ಅವರು ಅಮಾನತಾಗಿದ್ದಾರೆ.