ವಿಟ್ಲ: ಇಲ್ಲಿನ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಸಮರ್ಪಣ್ ವಿಟ್ಲ ಅರ್ಪಿಸುವ ಶಾಂಭವಿ ತುಳು ಹಾಸ್ಯಮಯ ನಾಟಕದ ಹಿನ್ನೆಲೆಯಲ್ಲಿ ಸಭಾ ಕಾರ್ಯಕ್ರಮ ಜ. 15ರಂದು ರಾತ್ರಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಮಾತನಾಡಿ, ಸಾಮಾಜಿಕ ಚಟುವಟಿಕೆಗೆ ಹಿನ್ನಡೆ ಆಗುತ್ತಿರುವ ಇಂದಿನ ಕಾಲದಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಮರ್ಪಣ್ ವಿಟ್ಲ ಇದರ ಕಾರ್ಯ ಮೆಚ್ಚುವಂತಹದ್ದು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿ, ಅವರ ಸೇವೆಯನ್ನು ಗುರುತಿಸಿ ಗೌರವಿಸುವಂತೆ ಮಾಡಿರುವುದು ಇಲ್ಲಿನ ಹೆಚ್ಚುಗಾರಿಕೆ. ಇದೇ ರೀತಿಯಲ್ಲಿ ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಕೂಡ ಮುಂದುವರಿಯುತ್ತಿದ್ದು, ಸಮಾನ ಮನಸ್ಕರು ಸೇರಿಕೊಂಡು ವಿದ್ಯಾರ್ಥೀವೇತನ, ನಗರಸಭಾ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕೆ.ಎಸ್.ಆರ್.ಟಿ.ಸಿ.ಯ ಕಾನೂನು ಅಧಿಕಾರಿ ನರಸಿಂಹ ಮೂರ್ತಿ ವಿಟ್ಲ ಅರಮನೆ ಮಾತನಾಡಿ, ಎಲ್ಲರನ್ನು ಸಮಾನವಾಗಿ ಕಾಣುತ್ತಾ, ಸಮಾನವಾಗಿ ಗೌರವಿಸುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ ನಮ್ಮದು. ಇಂತಹ ಕಾರ್ಯವನ್ನು ಸಮರ್ಪಣ್ ವಿಟ್ಲ ಹಮ್ಮಿಕೊಂಡಿದ್ದು, ಜಾತಿ – ಧರ್ಮ ಮೊದಲಾದ ಯಾವುದೇ ಬೇಧವನ್ನು ನೋಡದೇ ವೇದಿಕೆಯಲ್ಲಿ ಸನ್ಮಾನಿಸಿರುವ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಹೆಮ್ಮೆ ಎಂದರು.
ಸಮರ್ಪಣ್ ವಿಟ್ಲ ಅಧ್ಯಕ್ಷ ಯಶವಂತ್ ಎನ್. ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪುತ್ತೂರು ಸರ್ಕಾರಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾ. ಅಜಯ್ ಅವರನ್ನು ಸನ್ಮಾನಿಸಲಾಯಿತು.
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ನೀರು ಸರಬರಾಜು ವ್ಯವಸ್ಥೆಯಲ್ಲಿ ಪಂಪು ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಇದೇ ಸಂದರ್ಭ ಗೌರವಿಸಲಾಯಿತು.
ಜೆಸಿಐ ವಿಟ್ಲ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಯುವ ಉದ್ಯಮಿ ರಾಜೇಶ್ ತೋಡ್ಲ, ಸಮರ್ಪಣ್ ವಿಟ್ಲ ಗೌರವಾಧ್ಯಕ್ಷ ಕೃಷ್ಣಯ್ಯ ವಿಟ್ಲ ಅರಮನೆ, ಗೌರವ ಸಲಹೆಗಾರ ಮೋನಪ್ಪ ಗೌಡ ಶಿವಾಜಿನಗರ ಮುಖ್ಯ ಅತಿಥಿಯಾಗಿದ್ದರು.
ಯಶವಂತ್ ಎನ್. ಸ್ವಾಗತಿಸಿದರು. ಸಮರ್ಪಣ್ ವಿಟ್ಲದ ಕೋಶಾಧೀಕಾರಿ ನಿಖಿಲ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ರವಿಶಂಕರ್ ವಂದಿಸಿದರು. ಸಂಚಾಲಕ ಹರೀಶ್ ಕೆ. ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಡುಪಿ ಅಭಿನಯ ಕಲಾವಿದರಿಂದ ಶಾಂಭವಿ ನಾಟಕ ಪ್ರದರ್ಶನಗೊಂಡಿತು.