ಅಂಗನವಾಡಿಗಳಿಗೆ ತಾಪಂನಿಂದ ಅಂಬೇಡ್ಕರ್ ಭಾವಚಿತ್ರ
ಪರಿಶಿಷ್ಟ ಜಾತಿ, ಪಂಗಡದ ಹಿತರಕ್ಷಣಾ ಮತ್ತು ಕುಂದುಕೊರತೆ ನಿವರಣಾ ಸಮಿತಿ ಸಭೆಯಲ್ಲಿ ಆಕ್ರೋಶ
ಪುತ್ತೂರು: ವಸತಿ ಯೋಜನೆಯ ಹಣ ಇನ್ನೂ ಸರಕಾರದಿಂದ ಪಾವತಿಯಾಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪರಿಶಿಷ್ಟ ಜಾತಿ, ಪಂಗಡದ ಹಿತರಕ್ಷಣಾ ಮತ್ತು ಕುಂದುಕೊರತೆ ನಿವರಣಾ ಸಮಿತಿ ಸಭೆಯಲ್ಲಿ ನಡೆಯಿತು.ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಜ. ೧೬ರಂದು ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಸಭೆ ನಡೆಯಿತು.ವಿಷಯ ಪ್ರಸ್ತಾವಿಸಿದ ಮುಖಂಡರು, ಇನ್ನೂ ಅನೇಕ ಮಂದಿಗೆ ಫೌಂಡೇಷನ್ ಹಣವೇ ಬಂದಿಲ್ಲ. ವಸತಿ ಯೋಜನೆಯ ಫಲಾನುಭವಿಗಳಿಗೆ ಸರಕಾರದಿಂದ ಹಣ ಪಾವತಿಗೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಕ್ರಿಯಿಸಿದ ತಹಶೀಲ್ದಾರ್, ಹಣ ಪಾವತಿಗೆ ಬಾಕಿ ಇರುವವರ ಪಟ್ಟಿ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರಕಾರಕ್ಕೆ ಸಮಿತಿಯಿಂದ ಪತ್ರ ಬರೆಯಲಾಗುವುದು ಎಂದು ಸಭೆಗೆ ತಿಳಿಸಿದರು.ವಸತಿ ಯೋಜನೆ ಸೇರಿದಂತೆ ಇತರ ಯೋಜನೆಗಳ ಹಣವೂ ಬಾಕಿಯಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಬಂದಿರುವ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸುವಂತೆ ಆಗಬಾರದು ಎಂದು ಸಭೆಯಲ್ಲಿ ಪ್ರಮುಖರು ಒತ್ತಾಯಿಸಿದರು.
ಅಂಗನವಾಡಿಗಳಿಗೆ ತಾಪಂನಿಂದ ಅಂಬೇಡ್ಕರ್ ಭಾವಚಿತ್ರ:
ಅಂಗನವಾಡಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವಂತೆ ಸುತ್ತೋಲೆ ಬಂದಿರುವ ಬಗ್ಗೆ ತಿಳಿಸಲಾಯಿತು. ಈ ಬಗ್ಗೆ ಮಾತನಾಡಿದ ಎಸಿಡಿಪಿಓ ಭಾರತಿ, ಈಗಾಗಲೇ ಕೆಲವು ಅಂಗನವಾಡಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಹಾಕಲಾಗಿದೆ. ಭಾವಚಿತ್ರ ಇಲ್ಲದೇ ಇರುವ ಅಂಗನವಾಡಿಗಳಲ್ಲಿ ದಾನಿಗಳಿಂದ ಭಾವಚಿತ್ರ ಪಡೆದುಕೊಂಡು ಅಳವಡಿಸಲಾಗುವುದು ಎಂದರು.ಎಷ್ಟು ಅಂಗನವಾಡಿಗಳಲ್ಲಿ ಭಾವಚಿತ್ರ ಇದೆ. ದಾನಿಗಳಿಂದ ಎಷ್ಟು ಭಾವಚಿತ್ರ ಪಡೆದುಕೊಂಡಿದ್ದೀರಿ ಎಂಬ ಬಗ್ಗೆ ಮಾಹಿತಿ ಕೊಡಿ ಎಂದು ಕೂಸಪ್ಪ ಆಗ್ರಹಿಸಿದರು. ಮಧ್ಯಪ್ರವೇಶಿಸಿದ ತಾ.ಪಂ. ಇಓ ನವೀನ್ ಕುಮಾರ್ ಭಂಡಾರಿ, ಯಾವ ಅಂಗನವಾಡಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇಲ್ಲವೊ, ಅದರ ಲಿಸ್ಟ್ ಕೊಡಿ. ಅಲ್ಲಿಗೆ ಭಾವಚಿತ್ರ ನೀಡಲಾಗಿವುದು ಎಂದು ತಿಳಿಸಿದರು.
ತಾಲೂಕಿನಾದ್ಯಂತ ಆಹಾರ ಅಂಗಡಿಗಳಿಗೆ ದಾಳಿ:
ಮುಕೇಶ್ ಕೆಮ್ಮಿಂಜೆ ಮಾತನಾಡಿ, ಆಹಾರ ಘಟಕ, ಅಂಗಡಿಗಳಲ್ಲಿ ಆಹಾರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಉತ್ತರಿಸಿದ ಡಾ. ದೀಪಕ್ ರೈ, ಈಗಾಗಲೇ ಉಪ್ಪಿನಂಗಡಿ ಹಾಗೂ ಕೆಲವೆಡೆ ದಾಳಿ ನಡೆಸಲಾಗುತ್ತಿದೆ. ಕಂದಾಯ ಇಲಾಖೆಯಿಂದಲೂ ದಾಳಿ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಬಾಲಚಂದ್ರ ಸೊರಕೆ ಮಾತನಾಡಿ, ಕಬ್ಬಿನ ಜ್ಯೂಸ್ ಸೇರಿದಂತೆ ಹೆಚ್ಚಿನ ಅಂಗಡಿಗಳಲ್ಲಿ ನೈರ್ಮಲ್ಯ ಕಾಪಾಡುತ್ತಿಲ್ಲ. ಗ್ಲಾಸ್ ತೊಳೆಯಲು ಬೆಳಗ್ಗಿನಿಂದ ಸಂಜೆವರೆಗೆ ಒಂದೇ ಬಕೆಟಿನ ನೀರನ್ನು ಬಳಸುತ್ತಿರುವುದು ಕಂಡು ಬಂದಿದೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಜಾತ್ರೆಯ ಸಂದರ್ಭವೇ ಇದರ ಬಗ್ಗೆ ಮನವಿ ನೀಡಿದ್ದೇನೆ. ಅದರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಪ್ರತಿಕ್ರಿಯಿಸಿದ ಡಾ. ದೀಪಕ್ ರೈ, ಆಹಾರ ಘಟಕಗಳು ಪರವಾನಿಗೆ ಪಡೆದುಕೊಳ್ಳಬೇಕು ಎಂಬ ಸ್ಪಷ್ಟ ನಿರ್ದೇಶನ ಇದೆ. ಇದರಲ್ಲಿ ನೈರ್ಮಲ್ಯತೆ ಬಗ್ಗೆಯೂ ಸೂಚನೆ ಇದೆ. ಇದನ್ನು ಪಾಲಿಸದ ಅಂಗಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ್ ನಿಸರ್ಗಪ್ರಿಯ, ತಾಪಂ ಇಓ ನವೀನ್ ಕುಮಾರ್ ಭಂಡಾರಿ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ದೀಪಕ್ ರೈ, ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೃಷ್ಣ ಉಪಸ್ಥಿತರಿದ್ದರು.