ಪುತ್ತೂರು: ಎಸ್.ಆರ್.ಕೆ ಲ್ಯಾಡರ್ಸ್ ಸಂಸ್ಥೆಯನ್ನು ಆತ್ಮವಿಶ್ವಾಸದೊಂದಿಗೆ ಇಚ್ಛಾ ಶಕ್ತಿಯಿಂದ ಕಟ್ಟಿ ಬೆಳೆಸಿ ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿರುವ ಸಂಸ್ಥೆಯ ಮಾಲಕರಾದ ಕೇಶವ ಅವರ ಕೆಲಸ ಕಾರ್ಯ ಶ್ಲಾಘನೀಯ ಎಂದು ಎಂ.ಬಿ.ಫೌಂಡೇಶನ್ ನ ಎಂ.ಬಿ.ಸದಾಶಿವ ಹೇಳಿದರು.
ಅವರು ಶನಿವಾರ ಎಸ್.ಆರ್.ಕೆ. ಲ್ಯಾಡರ್ಸ್ ನ ಬೆಳ್ಳಿ ಹಬ್ಬದ ಸರಣಿ ಕಾರ್ಯಕ್ರಮದ ಮೂರನೇ ಕಾರ್ಯಕ್ರಮ ಅಂಗವಾಗಿ ಸುಳ್ಯ ಎಂ.ಬಿ.ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನಡೆದ ಸುಳ್ಯ ಸಾಂದೀಪ ವಿಶೇಷ ಚೇತನ ಮಕ್ಕಳೊಂದಿಗೆ ಸ್ನೇಹಕೂಟ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೇಶವರು ಆತ್ಮವಿಶ್ವಾಸದಿಂದ ತಾನು ಕೂಡಾ ಇತರರಂತೆ ಬದುಕಿ ತೋರಿಸಿರುವುದು ಆದರ್ಶವಾಗಿದ್ದು, ಅವರ ಬದುಕು ನಮ್ಮ ಮಕ್ಕಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು ಮಾತನಾಡಿ, ಜೀವನದಲ್ಲಿ ಪ್ರೀತಿಯಿಂದ ಇದ್ದರೆ ಜನ್ಮ ಸಾರ್ಥಕವಾಗುತ್ತದೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು, ಸಮಾಜದೊಟ್ಟಿಗೆ ಬೆರೆಯಬೇಕು ಎಂಬ ಉದಾರ ಮನೋಭಾವ ಹೊಂದಿರುವ ಕೇಶವ ಅವರ ಕಾರ್ಯಕ್ರಮ ಶ್ಲಾಘನೀಯ. ಜತೆಗೆ ಸಮಾಜಕ್ಕೆ ಒಳ್ಳೆಯ ಸೇವೆ ನೀಡುವ ದೃಷ್ಟಿಯಿಂದ ವಿಶೇಷ ಚೇತನ ಮಕ್ಕಳನ್ನೂ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿರುವ ಎಂ.ಬಿ.ಸದಾಶಿವರ ಕಾರ್ಯ ಮೆಚ್ಚುವಂತದ್ದು ಎಂದರು.
ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ಮಾಲಕರಾದ ಕೇಶವ ಅಮೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, 1999 ನವೆಂಬರ್ ನಲ್ಲಿ ಎಸ್.ಆರ್.ಕೆ. ಆರಂಭಗೊಂಡಿದ್ದು, 24 ವರ್ಷಗಳ ಯಶಸ್ವಿ ಪಯಣ ಪೂರೈಸಿದ್ದೇನೆ. ಇದು 25ನೇ ವರ್ಷ ಬೆಳ್ಳಿಹಬ್ಬ ಸಂಭ್ರಮ. ಸರಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೂರನೇ ಸರಣಿ ಕಾರ್ಯಕ್ರ,ಮ ಇದಾಗಿದೆ. ಮುಂದೆ ಆರು ಕಾರ್ಯಕ್ರಮ ಆಯೋಜನೆಯಾಗಲಿದ್ದು, ಮೇ.4 ರಂದು ಸಮಾರೋಪ ಸಮಾರಂಭವನ್ನು ನನ್ನ ಹುಟ್ಟೂರಾದ ಕಲಾಯಿಗುತ್ತಿನಲ್ಲಿ ನಡೆಸುವುದೆಂದು ನಿರ್ಧರಿಸಲಾಗಿದೆ ಎಂದರು.
ಪುತ್ತೂರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಮಾತನಾಡಿ, ವಿಶೇಷ ಚೇತನ ಮಕ್ಕಳ ಬೇಡಿಕೆ ಈಡೇರಿಸುವುದು, ಅರ್ಥ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಈ ನಿಟ್ಟಿನಲ್ಲಿ ಎಂ.ಬಿ.ಫೌಂಡೇನ್ ಕಾರ್ಯ ಮೆಚ್ಚತಕ್ಕದ್ದು. ಪ್ರತಿಯೊಂದು ವಿದ್ಯಾರ್ಥಿಗಳನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಶಿಕ್ಷಕರ ಗುಣ ಅವರಲ್ಲಿದೆ ಎಂದ ಅವರು, ಎಸ್.ಆರ್.ಕೆ. ಸಂಸ್ಥೆಯ ಮಾಲಕರಾದ ಕೇಶವ ಅವರಿಗೆ ಮುಂದಿನ ದಿನಗಳಲ್ಲಿ ಮಕ್ಕಳ ಸೇವೆ ಮಾಡುವ ಇನ್ನಷ್ಟು ಶಕ್ತಿ ಭಗವಂತ ನೀಡಲಿ ಎಂದು ಹೇಳಿದರು.
ಸುದ್ದಿ ಪತ್ರಿಕೆಯ ವರದಿಗಾರ ಲೋಕೇಶ್ ಬನ್ನೂರು ಪಾಲ್ಗೊಂಡು ಶುಭ ಹಾರೈಸಿದರು.
ಸಮಾರಂಭದಲ್ಲಿ ಎಂ.ಬಿ.ಸದಾಶಿವ, ಹರಿಣಿ ಸದಾಶಿವ ದಂಪತಿಯನ್ನು ಸನ್ಮಾನಿಸಲಾಯಿತು. ಸಂಸ್ಥೆಯಿಂದ ನಿರ್ಗಮಿಸುತ್ತಿರುವ ಸ್ವಾತಿ ಅವರನ್ನು ಅಭಿನಂದಿಸಲಾಯಿತು. ವಿಶೇಷ ಚೇತನ ಮಕ್ಕಳಿಗೆ ತರಬೇತಿ ನೀಡುತ್ತಿರುವ ಎಂ.ಬಿ.ಫೌಂಡೇಶನ್ ಖಜಾಂಚಿ ಶಿಕ್ಷಕರಾದ ಪುಷ್ಪಾ ರಾಧಾಕೃಷ್ಣ, ಸೌಮ್ಯ, ಸುಜಾತಾ, ಫಾತಿಮತ್ ರಮ್ಲಾ, ತೇಜಾವತಿ, ಮೀನಾಕ್ಷಿ, ಸತ್ಯವತಿ ಅವರನ್ನು ಸನ್ಮಾನಿಸಲಾಯಿತು.
ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯ ವತಿಯಿಂದ ವಿಶೇಷ ಚೇತನ ಮಕ್ಕಳಿಗೆ ಕಿರುಕಾಣಿಕೆ ನೀಡಲಾಯಿತು. ಸಂಸ್ಥೆಯ ಸಿಬ್ಬಂದಿ ಮಮತಾ ಪ್ರಾರ್ಥಿಸಿದರು. ಸಂಸ್ಥೆಯ ಸಿಬ್ಬಂದಿ ಯತೀಶ್ ವಂದಿಸಿದರು. ಬಳಿಕ ಸಾಂದೀಪ ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.