ಪುತ್ತೂರು: ಇಲ್ಲಿನ ಮಿನಿವಿಧಾನಸೌಧಕ್ಕೆ ಬಿಜೆಪಿ ಆಡಳಿತದ ಸಂದರ್ಭ ಎರಡೆರಡು ಬಾರಿ ಶಂಕುಸ್ಥಾಪನೆ ನೆರವೇರಿಸಿರುವವರಿಂದ ಈಗ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಯುತ್ತಿದೆ. ಕಾಮಗಾರಿ ಆರಂಭವಾಗದ ಯೋಜನೆಗಳಿಗೆ ಮರುಜೀವ ನೀಡುವ ಪ್ರಯತ್ನದಲ್ಲಿರುವ ಹಾಲಿ ಶಾಸಕರು ಶಿಲಾನ್ಯಾಸ ನೆರವೇರಿಸಿರುವುದರಲ್ಲಿ ಏನು ತಪ್ಪಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಪ್ರಶ್ನಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಶಿಲಾನ್ಯಾಸ ನೆರವೇರಿಸುವುದು ಸಹಜವಾದ ಪ್ರಕ್ರಿಯೆ. ಕಣಿಯೂರಿನಲ್ಲಿ, ಬನ್ನೂರಿನ ಎಸ್.ಸಿ. ಕಾಲನಿಗೆ 10 ಲಕ್ಷ ರೂ.ನಂತೆ ಕಾಮಗಾರಿ ನಡೆಸುವುದಾಗಿ ಹೇಳಿ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಇಲ್ಲಿವರೆಗೆ 1 ರೂ. ಕೂಡ ಬಂದಿಲ್ಲ. ಇಂತಹ ನಾಟಕಗಳನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಆ ಭಾಗಕ್ಕೆ ಅನುದಾನ ತಂದು, ಶಿಲಾನ್ಯಾಸ ನೆರವೇರಿಸುವಾಗ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ ಮಾತನಾಡಿ, ನಗರೋತ್ಥಾನ ಕಾಮಗಾರಿಗೆ ಕ್ರೀಯಾಯೋಜನೆ ಆಗುವ ಮೊದಲೇ ಸಚಿವರನ್ನು ಕರೆಸಿ ಶಿಲಾನ್ಯಾಸ ಮಾಡಿಸಲಾಗಿತ್ತು. ಶಿಲಾನ್ಯಾಸದ ಕಾಮಗಾರಿಗೆ ಯಾವುದೇ ಪ್ಲಾನ್ ಇರಲಿಲ್ಲ. ಅಂದರೆ ಮಂಜೂರಾಗದ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದಾರೆ. ನಗರೋತ್ಥಾನ ಕಾಮಗಾರಿಗೆ ಯಾಕೆ ಸ್ಥಳಕ್ಕೆ ಶಿಲಾನ್ಯಾಸ ಮಾಡಿಲ್ಲ. ಒಟ್ಟಿನಲ್ಲಿ ಚುನಾವಣೆ ತಂತ್ರಗಾರಿಕೆಯಲ್ಲಿ ಶಿಲಾನ್ಯಾಸ ಮಾಡಿದ್ದಾರೆ. ಆದ್ದರಿಂದ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಿ. ಅದು ಬಿಟ್ಟು ಹೊಟ್ಟೆಕಿಚ್ಚಿನಿಂದ ಮಾತನಾಡುವುದು ಬೇಡ ಎಂದು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಿಯಾಝ್, ಉಪಾಧ್ಯಕ್ಷರಾದ ಮೌರೀಸ್ ಮಸ್ಕರೇನಸ್, ಮಹಾಬಲ ವಳತ್ತಡ್ಕ ಉಪಸ್ಥಿತರಿದ್ದರು.