ಪುತ್ತೂರು: ಸರಕಾರದ ಅಧಿಸೂಚನೆಯನ್ವಯ ನೇಮಕಾತಿ ಹೊಂದಿ 2006, ಏ.1 ರ ನಂತರ ಕೆಲಸಕ್ಕೆ ಹಾಜರಾಗಿ ಪ್ರಸ್ತುತ ಎನ್.ಪಿ.ಎಸ್. ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಸರಕಾರಿ ನೌಕರರಿಗೆ ಓ.ಪಿ.ಎಸ್. ನೌಕರರೆಂದು ಪರಿಗಣಿಸುವುದಕ್ಕೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಆದೇಶ ಹೊರಬೀಳಲಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರಂತರ ಪ್ರಯತ್ನದ ಫಲವಾಗಿ ಜ.10 ರಂದು ಆರ್ಥಿಕ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರನ್ನು ಭೇಟಿ ಮಾಡಿ 2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗೆ ಒಳಪಟ್ಟ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ಪರಿಗಣಿಸಲು ಮನವಿ ಮಾಡಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಘ ತಿಳಿಸಿದೆ.
ಇದೀಗ ಬಹುದಿನಗಳ ಬೇಡಿಕೆಯಾದ, ಈ ಯೋಜನೆಯಿಂದ ರಾಜ್ಯದ 11,366 ಬಾಧಿತ ಎನ್.ಪಿ.ಎಸ್. ಸರಕಾರಿ ನೌಕರರು ಓ.ಪಿ.ಎಸ್. ಸೌಲಭ್ಯ ಪಡೆಯಲಿದ್ದಾರೆ. ರಾಜ್ಯದ 6 ಲಕ್ಷ ಸರಕಾರಿ ನೌಕರರ ಹಾಗೂ ಸಂಘದ ಪರವಾಗಿ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ.