ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಭವ್ಯ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗೋದಿಲ್ಲ ಎಂದು ಕಾಂಗ್ರೆಸ್ ಪಕ್ಷ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಜನವರಿ 22 ರಂದು ಮಧ್ಯಾಹ್ನ 12 ಗಂಟೆಗೆ ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಈ ಮೂಲಕ ರಾಮ ಮಂದಿರ ಉದ್ಘಾಟನೆ ಆಗಲಿದೆ. ಈ ಕಾರ್ಯಕ್ರಮದಿಂದ ದೂರ ಉಳಿಯಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ.
ಅಯೋಧ್ಯಾ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿಯ ರಾಜಕೀಯ ಯೋಜನೆ ಎಂದು ಬಣ್ಣಿಸಿರುವ ಕಾಂಗ್ರೆಸ್ ಪಕ್ಷ, ಇದು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಕಾರ್ಯಕ್ರಮ ಎಂದು ಹೇಳಿದೆ.
ಅಯೋಧ್ಯಾ ರಾಮ ಮಂದಿರ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಲೋಕಸಭಾ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕೃತವಾಗಿ ಆಹ್ವಾನ ಪತ್ರ ನೀಡಿತ್ತು. ಆದರೆ, ಮೂವರೂ ಕೂಡ ಈ ಆಹ್ವಾನವನ್ನು ತಿರಸ್ಕರಿಸಿದ್ದು, ಅಯೋಧ್ಯೆಗೆ ಬರೋದಿಲ್ಲ ಎಂದಿದ್ದಾರೆ.
ಧರ್ಮ ಅನ್ನೋದು ಸಂಪೂರ್ಣವಾಗಿ ವೈಯಕ್ತಿಕ ವಿಚಾರ. ಆದರೆ, ಆರ್‌ಎಸ್‌ಎಸ್ ಹಾಗೂ ಬಿಜೆಪಿ ಇದೇ ವಿಚಾರವನ್ನು ರಾಜಕೀಯ ಯೋಜನೆ ಮಾಡಿಕೊಂಡು ಅಯೋಧ್ಯೆಯ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ರೂಪಿಸಿವೆ. ಹಾಗೆ ನೋಡಿದರೆ ಈ ದೇಗುಲದ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಅಪೂರ್ಣ ದೇಗುಲವನ್ನು ಉದ್ಘಾಟನೆ ಮಾಡಲಾಗುತ್ತಿದೆ. ಇವೆಲ್ಲವೂ ಚುನಾವಣಾ ಲಾಭದ ದೃಷ್ಟಿಯಿಂದ ನಡೆಯುತ್ತಿರುವ ಪ್ರಯತ್ನ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮ ಮಂದಿರ ವಿಚಾರವಾಗಿ 2019ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ. ಕೋಟ್ಯಂತರ ರಾಮ ಭಕ್ತರ ಭಾವನೆಗಳಿಗೂ ನಾವು ಬೆಲೆ ಕೊಡುತ್ತೇವೆ. ಆದಾಗ್ಯೂ, ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕ್ರಮ ಆದ ಕಾರಣ ಗೌರವ ಪೂರ್ವಕವಾಗಿ ನಾವು ಈ ಆಹ್ವಾನವನ್ನು ತಿರಸ್ಕರಿಸುತ್ತಿದ್ದೇವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಭಾಗಿ ಆಗುತ್ತೋ? ಇಲ್ಲವೋ? ಅನ್ನೋದು ಭಾರೀ ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್ ಪಕ್ಷ ಹಾಗೂ ಸಂಸತ್‌ನಲ್ಲಿ ಪ್ರಮುಖ ಹುದ್ದೆಗಳಲ್ಲಿ ಇದ್ದ ನಾಯಕರಿಗೆ ಟ್ರಸ್ಟ್‌ನಿಂದ ಆಹ್ವಾನ ಹೋಗಿತ್ತು. ಪಕ್ಷದಲ್ಲಿ ಮುಖ್ಯಸ್ಥರ ಹುದ್ದೆಯಲ್ಲಿ ಇಲ್ಲದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಟ್ರಸ್ಟ್ ಅಧಿಕೃತ ಆಹ್ವಾನ ನೀಡಿರಲಿಲ್ಲ. ಸೋನಿಯಾ ಗಾಂಧಿ ಅವರು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ಧಾರೆ ಎಂದೇ ಹೇಳಲಾಗಿತ್ತು.
ಆದರೆ, ಅಲ್ಪಸಂಖ್ಯಾತ ಮತ ಬ್ಯಾಂಕ್ ಸೇರಿದಂತೆ ಹಲವು ಕಾರಣಗಳಿಂದಾಗಿ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿ ಕೂಟದ ಅಂಗ ಪಕ್ಷಗಳು ಕಾದು ನೋಡುವ ತಂತ್ರಕ್ಕೆ ಮುಂದಾಗಿವೆ ಅನ್ನೋ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಾಗುವ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದವು. ಇದೀಗ ಕಾಂಗ್ರೆಸ್ ತಾನು ಭಾಗಿಯಾಗಲ್ಲ ಅಂತಾ ಅಧಿಕೃತ ಪ್ರಕಟಣೆ ಹೊರಡಿಸಿದೆ.