ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಜ. 18ರಿಂದ 28ರವರೆಗೆ ಬೆಂಗಳೂರಿನ ಲಾಲ್ ಭಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ‘ವಿಶ್ವಗುರು ಬಸವಣ್ಣ’ ಅವರ ಹೂವಿನ ಪ್ರತಿಕೃತಿ ಕಣ್ಮನ ಸೆಳೆಯಲಿದೆ. ವಚನ ಸಾಹಿತ್ಯವನ್ನು ಪುಷ್ಪಗಳಲ್ಲಿ ಅರಳಿಸಲು ತೋಟಗಾರಿಕೆ ಇಲಾಖೆ ಸಿದ್ದತೆ ನಡೆಸುತ್ತಿದೆ ಎಂದು ಲಾಲ್ಬಾಗ್ನ ಜಂಟಿ ನಿರ್ದೇಶಕ ಎಂ. ಜಗದೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು ವೆಚ್ಚ 2.75 ಕೋಟಿ ರೂ. ಆಗುತ್ತಿದ್ದು, ಪುಷ್ಪ ಪ್ರದರ್ಶನದ ವೆಚ್ಚ, ಪ್ರವೇಶ ಶುಲ್ಕವನ್ನು ಇನ್ನೂ ನಿರ್ಧರಿಸಬೇಕಿದೆ. ಫಲಪುಷ್ಪ ಪ್ರದರ್ಶನದ ವೇಳೆ ಸ್ವಚ್ಛತೆ ಕಾಪಾಡುವ ಕುರಿತು ಮುಂದಿನ ಮೂರು ದಿನಗಳಲ್ಲಿ ಉನ್ನತ ಅಧಿಕಾರಿಗಳು, ಪರಿಸರ ತಜ್ಞರು, ಬಿಬಿಎಂಪಿ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆಂದು ತಿಳಿಸಿದರು.
ಇದೇ ವೇಳೆ ಸಾರ್ವಜನಿಕರು ಮೆಟ್ರೋವನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಸ್ಮಾರ್ಟ್ ಪಾರ್ಕಿಂಗ್ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು.