ಸ್ಟಾರ್ಟ್ ಅಪ್ ಕಂಪೆನಿಯ ಮಹಿಳಾ ಸಿಇಒ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಮುದ್ದಾದ ಮಗು ಚಿನ್ಮಯ್ ನನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೊಂದೆಡೆ ಮಗುವಿನ ಮರಣೋತ್ತರ ಪರೀಕ್ಷೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆಸಿದ್ದು, ಬೆಂಗಳೂರಿಗೆ ಬುಧವಾರ ಕಳುಹಿಸಲಾಗುತ್ತಿದೆ.
ಗೋವಾದ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಮಗುವನ್ನು ಕೊಂದು ಸೂಟ್ ಕೇಸ್ ನಲ್ಲಿ ಹಾಕಿ ಬೆಂಗಳೂರಿಗೆ ಟ್ಯಾಕ್ಸಿಯಲ್ಲಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಸುಚನಾ ಸೇಠ್ ಳನ್ನು ನಿನ್ನೆ ಚಿತ್ರದುರ್ಗದ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದರು.
ಇಂದು ಅಂತ್ಯಸಂಸ್ಕಾರ:
ಮಗುವಿನ ಮೃತದೇಹ ಬೆಂಗಳೂರಿನಲ್ಲಿ ಸುಚನಾ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ಗೆ ಕರೆತರಲಾಗುತ್ತಿದೆ. ಮಗುವಿನ ತಂದೆ ವೆಂಕಟ ರಾಮನ್ ಇಂಡೋನೇಷಿಯಾದಿಂದ ಚಿತ್ರದುರ್ಗಕ್ಕೆ ಬಂದು ಪೊಲೀಸರೊಂದಿಗೆ ವಿಚಾರಣೆಗೆ ಸಹಕರಿಸಿದ್ದು, ಇಂದು ಬೆಂಗಳೂರಿನಲ್ಲಿ ಮಗುವಿನ ಅಂತ್ಯಸಂಸ್ಕಾರ ನಡೆಸಲಿದ್ದಾರೆ.
6 ದಿನ ಪೊಲೀಸ್ ಕಸ್ಟಡಿಗೆ:
ಸುಚನಾ ಅವರ ಹಿನ್ನೆಲೆ, ಪತಿ ವೆಂಕಟರಮಣ ಜೊತೆ ಇದ್ದ ಸಂಬಂಧ, ಕುಟುಂಬ ಹಾಗೂ ಮಗುವಿನ ಹತ್ಯೆ ಸಂಬಂಧಪಟ್ಟಂತೆ ವಿಚಾರಣೆಗೊಳಪಡಿಸಲು ಸುಚನಾಳನ್ನು ಗೋವಾ ಪೊಲೀಸರು 6 ದಿನ ಕಸ್ಟಡಿಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಪತಿ ವೆಂಕಟರಮಣ ಅವರನ್ನು ಸಹ ಕರೆಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಮರಣೋತ್ತರ ಪರೀಕ್ಷೆ:
ಹಿರಿಯೂರು ತಾಲೂಕು ಆಸ್ಪತ್ರೆ ಶವಾಗಾರದಲ್ಲಿ ವೈದ್ಯಾಧಿಕಾರಿ ಡಾ.ಕುಮಾರ ನಾಯ್ಕ್, ಡಾ.ರಂಗೇಗೌಡ ಅವರು ಮೃತ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಕುಮಾರ ನಾಯ್ಕ್, 36 ಗಂಟೆಗಳ ಹಿಂದೆಯೇ ಮಗುವಿನ ಹತ್ಯೆಯಾಗಿದೆ. ಕೈಯಿಂದ ಕತ್ತು ಹಿಸುಕಿ ಹತ್ಯೆ ಮಾಡಿಲ್ಲ. ತಲೆ ದಿಂಬು ಅಥವಾ ಬೇರೆ ವಸ್ತು ಬಳಸಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಉಸಿರುಗಟ್ಟಿಸಿದ ಕಾರಣ ಮಗುವಿನ ಮುಖ, ಎದೆಭಾಗ ಊದಿಕೊಂಡಿದೆ. ಹೀಗಾಗಿ ಮಗುವಿನ ಮೂಗಿನಿಂದ ರಕ್ತಸ್ರಾವವಾಗಿದೆ ಎಂದು ತಿಳಿಸಿದ್ದಾರೆ.