ಜರ್ಮನಿಯ ಫುಟ್ಬಾಲ್ ತಂಡದ ವಿಶ್ವಕಪ್ ವಿಜೇತ ನಾಯಕ ಮತ್ತು ಕೋಚ್ ಫ್ರಾಂಜ್ ಬೆಕನ್ಬೌರ್ (78) ನಿಧನರಾಗಿದ್ದಾರೆ ಎಂದು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ಪ್ರಕಟಿಸಿದೆ.
“ಫ್ರಾಂಜ್ ಬೆಕನ್ಬೌರ್ ಅಗಲಿಕೆ ತೀವ್ರ ದುಃಖದ ವಿಚಾರ” ಎಂದು ಅವರ ಕುಟುಂಬವು ಜರ್ಮನ್ ಸುದ್ದಿ ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಿದೆ.
1974ರಲ್ಲಿ ಜರ್ಮನಿ ತಂಡದ ನಾಯಕರಾಗಿದ್ದಾಗ ಬೆಕನ್ಬೌರ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದರು. ನಿವೃತ್ತಿ ಬಳಿಕ ಅವರು ತಂಡದ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡ 1990ರಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆದ್ದಿತ್ತು. ಬೆಕನ್ಬೌರ್ ನಾಲ್ಕು ಬಾರಿ ಬುಂಡೆಸ್ಲಿಗಾ ಮತ್ತು ನಾಲ್ಕು ಬಾರಿ ಜರ್ಮನ್ ಕಪ್ ಗೆದ್ದಿದ್ದಾರೆ. ಬೆಕನ್ಬೌರ್ 1974ರಿಂದ 1976ರವರೆಗೆ ಸತತ ಮೂರು ಯುರೋಪಿಯನ್ ಕಪ್ ವಿಜೇತ ತಂಡವನ್ನು ಮುನ್ನಡೆಸಿದ್ದರು. ಜರ್ಮನಿ ತಂಡದ ತರಬೇತುದಾರರಾಗಿದ್ದಾಗ, ಅವರ ತರಬೇತಿಯಲ್ಲಿ ಜರ್ಮನ್ ತಂಡವು 1986ರ ವಿಶ್ವಕಪ್ಪಿನಲ್ಲಿ ಫೈನಲ್ ತಲುಪಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಎದುರು ಸೋಲು ಕಂಡಿತ್ತು. ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರು ಬೆಕನ್ಬೌರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಈ ಆಟದ ಮೇಲೆ ಅವರ ಪ್ರಭಾವ ಅಸಾಧಾರಣವಾದುದು ಎಂದು ಬಣ್ಣಿಸಿದ್ದಾರೆ. ಜತೆಗೆ ಜರ್ಮನಿ ಫುಟ್ಬಾಲ್ ಸಂಸ್ಥೆಯೂ ಸಂತಾಪ ಸೂಚಿಸಿದೆ.