ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತುಗೊಳಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಡೆಪ್ಯುಟಿ ಮಿನಿಸ್ಟರ್ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರ ವಿರುದ್ಧ ಮಾಲ್ಡೀವ್ಸ್ ಸರ್ಕಾರವು ಕ್ರಮ ಕೈಗೊಂಡಿದೆ.
ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರ ಕುರಿತು ಮಾಲ್ಡೀವ್ ಸಚಿವ ಮರಿಯಮ್ ಶಿಯುನಾ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಲಕ್ಷದ್ವೀಪ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಸರಿ. ಆದರೆ ನಮ್ಮೊಟ್ಟಿಗೆ ಸ್ಪರ್ಧಿಸಲು ನಿಮಗೆ ಆಗುವುದಿಲ್ಲ ಅದು ಭ್ರಮೆ. ಭಾರತವು ಸಮುದ್ರತೀರದ ಪ್ರವಾಸೋದ್ಯಮದಲ್ಲಿ ಮಾಲ್ಡೀವ್ಸ್ ನೊಂದಿಗೆ ಸ್ಪರ್ಧಿಸಲು ಆಗುವುದಿಲ್ಲ. ಸಮಸ್ಯೆ ಎದುರಿಸಲಿದೆ ಎಂದಿದ್ದರು. ಅಲ್ಲದೇ ಪ್ರಧಾನಿ ಮೋದಿ ಅವರ ಬಗ್ಗೆಯೂ ತೀವ್ರವಾಗಿ ಟೀಕಿಸಿದ್ದರು.
ಈ ವಿಷಯ ಗಮನಕ್ಕೆ ಬಂದ ಕೂಡಲೇ ಮಾಲ್ಡೀವ್ಸ್ ಸರ್ಕಾರ ಸಚಿವರ ಹೇಳಿಕೆಗಳು ಸರ್ಕಾರದ ಅಭಿಪ್ರಾಯವಲ್ಲ. ನಾವು ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದೀಗ ಈ ಮಾತಿನಂತೆ ನಡೆದುಕೊಂಡು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಎಕ್ಸ್ ಖಾತೆಯಲ್ಲಿ ಈ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆ ಬಾಯಕಾಟ್ ಮಾಲ್ಡೀವ್ಸ್ ಹ್ಯಾಶ್ಟ್ಯಾಗ್ನಲ್ಲಿ ಅಭಿಯಾನ ಶುರುವಾಗಿತ್ತು. ಸಿನೆಮಾ ತಾರೆಯರು ಸೇರಿದಂತೆ ಹಲವಾರು ಭಾರತೀಯರು ಮಾಲ್ಡಿವ್ಸ್ ಗೆ ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಅಲ್ಲದೇ, ಬಾಯ್ಕಾಟ್ ಮಾಲ್ಡೀವ್ಸ್ ಹ್ಯಾಶ್ ಟ್ಯಾಗ್ ಅಭಿಯಾನಕ್ಕೆ ನಾಗರಿಕರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಅಭಿಯಾನ ಘೋಷಣೆ ಆಗುತ್ತಿದ್ದಂತೆ ಮಾಲ್ಡೀವ್ಸ್ ನಲ್ಲಿ ಬುಕ್ಕಿಂಗ್ ಆಗಿದ್ದ ಸುಮಾರು 8000ಕ್ಕೂ ಅಧಿಕ ಮಂದಿ ಬುಕ್ಕಿಂಗ್ ರದ್ದು ಪಡಿಸಿದ್ದಾರೆ. ಮಾತ್ರವಲ್ಲ, 2500ಕ್ಕೂ ಅಧಿಕ ಮಂದಿ ತಮ್ಮ ಟಿಕೇಟ್ ಅನ್ನು ರದ್ದು ಪಡಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.