ಪುತ್ತೂರು: ಅರ್ಹ ಎಲ್ಲಾ ಕೃಷಿಕರಿಗೂ ಸವಲತ್ತುಗಳು ಸಿಗಬೇಕು. ಆ ಸವಲತ್ತನ್ನು ಅವರಿಗೆ ತಲುಪಿಸುವ ಕೆಲಸ ಆಗಬೇಕು. ಯಾವುದೇ ಇಲಾಖೆಯಿಂದ ಸವಲತ್ತಿಗಾಗಿ ಲಂಚ ಕೇಳಿದ್ರೆ ನನಗೆ ತಿಳಿಸಿ. ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ತಾಲೂಕು ಕೃಷಿಕ ಸಮಾಜ ಹಾಗೂ ಪುತ್ತೂರು ಕೃಷಿ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ನಡೆದ ಕೃಷಿ ಮಾಹಿತಿ, ಸಂವಾದ, ಸನ್ಮಾನ ಹಾಗೂ ಸವಲತ್ತು ವಿತರಣಾ ಕಾರ್ಯಕ್ರ ಉದ್ಘಾಟಿಸಿ, ಸವಲತ್ತು ವಿತರಿಸಿ ಮಾತನಾಡಿದರು.
ಅಡಿಕೆ ಕೃಷಿಕರು ಪ್ರಸ್ತುತ ತೊಂದರೆ ಅನುಭವಿಸುತ್ತಿದ್ದಾರೆ. ಕೃಷಿಗೂ ಕಾರ್ಮಿಕರ ಕೊರತೆ ಇದೆ. ಭತ್ತ ಕೃಷಿ ಕುಂಠಿತವಾಗಿರುವುದು ಆತಂಕದ ವಿಚಾರವಾಗಿದೆ. ಆದರೂ ಬೆಳೆ ವಿಮೆಯಿಂದ ರೈತರು ಸ್ವಲ್ಪ ಸುಧಾರಿಸಿದ್ದಾರೆ ಎಂದ ಅವರು, ತರಕಾರಿ ಬೆಲೆಗೂ ಉತ್ತೇಜನ ನೀಡುವ ಕೆಲಸ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಮಾತನಾಡಿದರು.
ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹೈನುಗಾರಿಕೆ ಮತ್ತು ಭತ್ತದ ಕೃಷಿಗಾಗಿ ವೀಣಾ ಬಲ್ಲಾಳ್ ಬೀಡು ಹಾಗೂ ಭತ್ತದ ಕೃಷಿಗಾಗಿ ದಾಜಮ್ಮ ಅವರನ್ನು ಸನ್ಮಾನಿಸಲಾಯಿತು.
ಉಪ ಕೃಷಿ ನಿರ್ದೇಶಕ ಶಿವಶಂಕರ್ ಹೆಚ್.ಡಿ., ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಪ್ರಕಾಶ್, ಪುತ್ತೂರು ಕೃಷಿ ಇಲಾಖೆ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಯಶಸ್ ಮಂಜುನಾಥ್ ಉಪಸ್ಥಿತರಿದ್ದರು.