ಅಮೃತರು ಎಷ್ಟೊಂದು ಮೆಲುದನಿಯ ಮೆದುಹೃದಯದ ಸಜ್ಜನರು…

ಪೂಕರೆ.

ಗುರಿಕಾರರಾಗಿದ್ದ ಅಮೃತ ಸೋಮೇಶ್ವರರ ಮದಿಪು

1989 ಏಪ್ರಿಲ್ 15 ಮತ್ತು16ರಂದು ಮುಲ್ಕಿ ನಾರಾಯಣ ಕಿಲ್ಲೆ ನಗರದ (ಬಪ್ಪನಾಡು) ದೊಂಪದಲ್ಲಿ ಅಖಿಲ ಭಾರತ ತುಳು ಸಮ್ಮೇಳನ ನಡೆಯುತ್ತದೆ. ಸಮ್ಮೇಳನದ ಅಧ್ಯಕ್ಷತೆಯನ್ನು  ಕವಿ, ಕತೆಗಾರ, ಸಂಶೋಧಕ, ಜನಪದ ಲೇಖಕ ,ಪ್ರಾಧ್ಯಾಪಕ, ಯಕ್ಷಗಾನ ಪ್ರಸಂಗಕರ್ತ ಶ್ರೀ ಅಮೃತ ಸೋಮೇಶ್ವರರು ವಹಿಸುತ್ತಾರೆ.



































 
 

ಅಮೃತರು ಎಂತಹ ಸಜ್ಜನ ಸಹನಾಶೀಲ ಮೆಲುದನಿಯವರು ಎಂದರೆ ತಮ್ಮ ಅಧ್ಯಕ್ಷ ಭಾಷಣದ ಆರಂಭದಲ್ಲಿ…

(ಅಮೃತರ ಪೂಕರೆ ಗುರಿಕಾರ್ಮೆದ ಮದಿಪು ನುಡಿಗಳ ಆರಂಭದ ಮಾತುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಕೃಪೆ.: ಡಾ.ಚಿನ್ನಪ್ಪ ಗೌಡರು ಸಂಪಾದಿಸಿದ ನೆನಪಿನ ಸಂಚಿಕೆ ಪನಿಯಾರ)

ಈ ಮಹಾಸಬೆಯಲ್ಲಿರುವ ಎಲ್ಲರಿಗೂ ಕೈಮುಗಿದು ವಂದಿಸುತ್ತಿದ್ದೇನೆ. ಸಾಮಾನ್ಯವಾಗಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ವ್ಯಕ್ತಿ ತನ್ನ ಅಧ್ಯಕ್ಷ ಭಾಷಣದ ಆರಂಭದಲ್ಲಿ ತಮಗೆ ಕೊಟ್ಟಿರುವ ಮನ್ನಣೆಯ ಮಣೆಗಾಗಿ ಸೊಲ್ಮೆ ಸಂದಾಯ ಮಾಡುವುದು ಮತ್ತು ಅದೇ ವೇಳೆಯಲ್ಲಿ ತನ್ನ ಇತಿಮಿತಿಯನ್ನು ಹೇಳಿಕೊಳ್ಳುವುದು ಕೂಡ ಒಂದು ಶಿಷ್ಟಾಚಾರ. ಚಂದದ ಕೆಲವು ಶಿಷ್ಟಾಚಾರಗಳು ಎಂದಿಗೂ ಬೇಕು ಎನ್ನುವ ನಾನು ಕೂಡಾ ಹಿರಿಯರು ಹಾಕಿಕೊಟ್ಟ ಆ ವಿನಯದ ಗೆರೆಗಳನ್ನು ಈ ವಿಷಯದಲ್ಲಿ ದಾಟಿ ಹೋಗುವುದಿಲ್ಲ .ಅಲ್ಲದೆ ನನ್ನ ಪಾಲಿಗೆ ಕೇವಲ ಶಿಷ್ಟಾಚಾರ ಅಲ್ಲ, ನಿಜ ಸಂಗತಿಗಳ ನಿವೇದನೆಯೂ ಹೌದು.

ತುಳುನಾಡಿನ ಒಡಲ ಸವಿಯ ಹಲವಾರು ಕ್ಷೇತ್ರಗಳಲ್ಲಿ ಒಂದಾದ ಮುಲ್ಕಿ- ಬಪ್ಪನಾಡಿನಲ್ಲಿ ನಡೆಯುತ್ತಿರುವ ಈ ಅಖಿಲ ಭಾರತ ತುಳು ಸಮ್ಮೇಳನದ ಅಧ್ಯಕ್ಷತೆಯ ದೊಡ್ಡ ಜವಾಬ್ದಾರಿಯ ಈ ಝರಿಯ ಮುಂಡಾಸನ್ನು ನನ್ನ ತಲೆಗೆ ಏರಿಸಿರುವ ಬಂಧುಗಳಿಗೂ, ಸಮ್ಮೇಳನ ಸಮಿತಿಯ ಬಳಗದವರಿಗೂ.. ನನ್ನ ಒಡಲು ತುಂಬಿದ ಪ್ರೀತಿಯ ಸೊಲ್ಮೆಗಳನ್ನು ಸಂದಾಯ ಮಾಡುತ್ತಿದ್ದೇನೆ.

ಬಯಲಾಟದಲ್ಲಿ ಕೋಲು ಕಿರೀಟ ಹೊತ್ತವನ ತಲೆಗೆ ಬಣ್ಣ ಬಣ್ಣದ ಬಹುಭಾರವಿರುವ ‘ತಡ್ಪೆ ಕಿರೀಟ’ ತುಂಬಿಸಿದ ಪರಿಸ್ಥಿತಿಯಲ್ಲಿ ನಾನಿದ್ದೇನೆ ಎನ್ನುವ ಇಷ್ಟೇ ಮಾತಿನಲ್ಲಿ ನನ್ನ ಇತಿಮಿತಿಯನ್ನು ಹೇಳಿದರೆ ಸಾಕಾಗಲಾರದು ಎಂದು ತೋರುತ್ತದೆ. ಸಹೃದಯರಾದ ತುಳು ಬಂಧುಗಳ ಪ್ರೀತಿಯ ಒಲುಮೆಗಳಲ್ಲಿ ಈ ಬಹುಭಾರ ಹೂವಿನ ಹಾಗೆ ಹಗುರಾಗಬಹುದು ಎಂದು ಕೊಳ್ಳುವೆ.

ಇಂದು ನಾಳೆ ತುಳುದೇವತೆಗಳಿಗೆ ಬಹು ದೊಡ್ಡ ಹಬ್ಬ. ಬಪ್ಪನಾಡಿನಲ್ಲಿ ನಡೆಯುವ ತುಳು ದೈವಗಳ ಧರ್ಮನೇಮ.

ಕೊಡಿ, ಗುರ್ಜಿ, ಮೇರುವೆ ,ಚೋರಣ, ಬೆಡಿ- ಕದಿನ, ಸಂತೆ ಸಡಂಗರ‘ ಬಿರ್ದ್- ಬಿಲ್ಮಾಣ, ನಲಿಕೆ ‘ನೆರೊಣಿಗೆದ ಗೌಜಿ ,ತುಳುವಪ್ಪೆಯ ಸಿರಿಸಿಂಗದನವನ್ನು ಸಿಂಗರಿಸಿ ಇಟ್ಟಾಗಿದೆ.

60 ಕಾಲಿನ ಗದ್ದಿಗೆಯಲ್ಲಿ.. ಸರ್ಪಲಿಂಗದಲ್ಲಿ… ಮತ್ತು ಮೈರಬಾಣೊಡು, ಮೊರಂಪಾಯಿ ಮಲ್ಲಿಗೆಡ್, ಕೇಕಾಯಿ ಸಂಪಾಯಿಡ್, ಓಲೆಗಾತಿ ತುಳುವಪ್ಪೆಯ ಮುಖದ ಸೌಂದರ್ಯವನ್ನು ನೋಡಲು ನಾವೆಲ್ಲ ಇಲ್ಲಿ ಸೇರಿದ್ದೇವೆ .

ಪಟ್ಟೆ ರೇಶ್ಮೆಯ ವಸ್ತ್ರಾಭರಣಗಳೊಂದಿಗೆ ಅವರನ್ನು ಸಿಂಗರಿಸಿ ಅವರ ಕಾಲ ಬುಡಗಳಿಗೆ ಹೂವು- ಹಣ್ಣುಗಳನ್ನು ಸುರಿದು ದೂಪ- ದೀಪಗಳನ್ನು ತೋರಿಸಿ, ಹೊಗಳಿಕೆಯ ತೆಂಬರೆ ಬಾರಿಸಿ, ಭಕ್ತಿಯ ಪಾಡ್ದನ ಹೇಳಿ, ನಲಿಯುವುದಕ್ಕಾಗಿ ಒಟ್ಟಾಗಿದ್ದೇವೆ.

ತುಳು ಭಾಷಾ ಚಳುವಳಿಗೆ ಅಮೃತರ ಕೊಡುಗೆ:

ತುಳು ಭಾಷಾ ಚಳುವಳಿಗೆ ಅಮೃತರ ಕೊಡುಗೆ ಅಪಾರವಾದದ್ದು. ತುಳುವಿನಲ್ಲಿ ಜೋಕುಮಾರಸ್ವಾಮಿಯ ಅನುವಾದ ಹಾಗೂ ಸ್ವತಂತ್ರ ತುಳು ನಾಟಕ ‘ಗೋಂದೊಳು ‘ಮೂಲಕ ಆಧುನಿಕ ರಂಗಭೂಮಿ ವಿಸ್ತಾರಗೊಳ್ಳಲು ಕಾರಣರಾದ ಮೊಟ್ಟ ಮೊದಲಿಗರು ಅಮೃತ ಸೋಮೇಶ್ವರರು.

ತುಳು ಭಾಷಾ ಬೆಳವಣಿಗೆಯ ಚಳುವಳಿಗೆ ತುಳು ನಾಟಕಗಳ ಕೊಡುಗೆಯೂ ಅಷ್ಟೇ ಮುಖ್ಯವಾದದ್ದು. ತುಳುವಿನಲ್ಲಿ ಕವನ ಸಂಕಲನ, ಕಥೆ, ಕಾದಂಬರಿಗಳಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ನಾಟಕಗಳು ಮುದ್ರಣಗೊಂಡಿವೆ. ಪ್ರಯೋಗಗಳಾಗಿವೆ.

ಅದರಲ್ಲಿಯೂ ತುಳು ಭಾಷೆಯಲ್ಲಿ ತುಳುನಾಡಿನ ಐತಿಹಾಸಿಕ ವ್ಯಕ್ತಿತ್ವ ‘ರಾಣಿ ಅಬ್ಬಕ್ಕಳ’ ಬಗ್ಗೆ 1970ರ ಮೊದಲೇ ನಾಲ್ಕು ನಾಟಕಗಳು ಪ್ರಕಟವಾಗಿದ್ದವು. ಅಮೃತರು ಆಧುನಿಕ ತುಳು ನಾಟಕ ವಿದ್ವಾಂಸರು ಎಂದು ಜನಪ್ರಿಯರಾದ ಬಳಿಕ ‘ರಾಣಿ ಅಬ್ಬಕ್ಕನ’ ಕುರಿತಾಗಿ  ಒಂದು ನಾಟಕ ಬರೆಯುತ್ತಾರೆ. ಭಾಷೆಯ ದೃಷ್ಟಿಯಲ್ಲಿ ತುಂಬ ಚಂದದ ಬಳಕೆ.

ಆದರೆ 1525ರಿಂದ 1625 ಅವಧಿಯ ನಡುವೆ ಆಳ್ವಿಕೆ ನಡೆಸಿದ ಅಬ್ಬಕ್ಕನ ಕುರಿತಾದ ಮೊದಲ ನಾಲ್ಕು ನಾಟಕಗಳಲ್ಲಿ ಪೊರ್ಚುಗೀಸ್ ಸೈನಿಕರು ಅಧಿಕಾರಿಗಳು ರಂಗದಲ್ಲಿ ಮಾತನಾಡುವಾಗ ಇಂಗ್ಲಿಷ್ ಭಾಷೆ ಮತ್ತು ಆ ಕಾಲದ ಕಂಪನಿ ನಾಟಕಗಳ ಸ್ಲಾಂಗ್ ನಲ್ಲಿ ಮಾತನಾಡುತ್ತಿದ್ದರು.

ಬಳಿಕ ಬಂದ ಅಮೃತರ ಅಬ್ಬಕ್ಕ ನಾಟಕದಲ್ಲಿ ಕೂಡಾ ಪಾತ್ರಗಳು ಇಂಗ್ಲಿಷ್ ನಲ್ಲಿಯೇ ಮಾತನಾಡುತ್ತವೆ.

ಅಬ್ಬಕ್ಕ ಕಾಲವಾದ ಬಳಿಕವಷ್ಟೇ ತುಳು ನಾಡಿಗೆ ಇಂಗ್ಲೀಷರ ಪ್ರವೇಶವಾದುದಲ್ಲವೇ?….ಆ ದಿನಗಳಲ್ಲಿ ಅವರು ಇಂಗ್ಲಿಷ್ ಮಾತನಾಡುವುದಕ್ಕೆ ಹೇಗೆ ಸಾಧ್ಯ? ನಿಮ್ಮ ನಾಟಕಲ್ಲಿಯೂ ಇಂಗ್ಲಿಷ್ ಬಳಕೆ ಆಗಿದೆಯಲ್ಲವೇ? ಎಂದು ಅಮೃತರಲ್ಲಿ ತಮಾಷೆಗಾಗಿ ಮಾತನಾಡಿದಾಗ ಅವರು ನಕ್ಕು ಸುಮ್ಮನಾಗಿದ್ದರು. ಸ್ವಲ್ಪ ಸಮಯ ಮೌನದ ಬಳಿಕ.. ನೋಡು.. ನಾಟಕದ ಭಾಷೆ, ರೂಪ, ತಂತ್ರ ಯಾವುದೇ ಇರಲಿ. ನೋಡುವವರಿಗೆ ಅರ್ಥವಾದರೆ ಸಾಕು. ಪೊರ್ಚುಗೀಸರ ಭಾಷೆ ಎಂದು ಇಲ್ಲಿನ ಕಿರಿಸ್ತಾನಿಗಳ ಕೊಂಕಣಿ ಅಥವಾ ಗೋವಾ ಜನಗಳ ಕೊಂಕಣಿ ಭಾಷೆ ಬಳಸಿದರೆ ಪರಿಣಾಮಕಾರಿ ಆದೀತೇ? ಎಂದು ನನ್ನನ್ನು ಸಮಾಧಾನ ಮಾಡಿದ್ದರು. ಮತ್ತೆ ಮುಂದುವರಿದು..

ಇಲ್ಲಿ ಕೇಳು.. ಈ ತಪ್ಪನ್ನು ಯಕ್ಷಗಾನದಲ್ಲಿ ಮಾಡುವಂತಿಲ್ಲ, ಮಾಡಬಾರದು ಮತ್ತು ನಾವು ಯಾರೂ ಯಕ್ಷಗಾನದಲ್ಲಿ ಹಾಗೆ ಮಾಡಿಯೇ ಇಲ್ಲ ಎಂದು ಹೇಳಿದ್ದರು.

ಮತ್ತು ಹಾಗೆ ಹೇಳುವಾಗ ಅವರ ಮೆಲುದನಿ ಸ್ವಲ್ಪ ಏರು ಸ್ವರದಲ್ಲಿದ್ದುದೂ ನಿಜ.

  • ಐ.ಕೆ.ಬೊಳುವಾರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top