ಪುತ್ತೂರು: ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬಂದಿದ್ದೇವೆ. ಆದ್ದರಿಂದ ಅಂದು ರಾಜರು ಮಾಡುತ್ತಿದ್ದ ದೇವಸ್ಥಾನದ ಕೆಲಸವನ್ನು, ಇಂದು ಪ್ರಜೆಗಳೇ ಮಾಡುತ್ತಿದ್ದಾರೆ. ಈ ಮೂಲಕ ದೇವರ ಭಕ್ತಿ, ಧರ್ಮದ ಶ್ರದ್ಧೆ, ಜನರ ಸಮರ್ಪಣೆಯನ್ನು ಕಾಣಬಹುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಬೆಳಂದೂರು ಅಗಳಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜರ ಕಾಲದ ಶಿಲ್ಪಕಲೆ, ಅವರ ಶ್ರದ್ಧೆಯನ್ನು ಇಂದು ನಾವು ಮತ್ತೊಮ್ಮೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲೂ ಸರ್ವಧರ್ಮೀಯರು ಒಂದಾಗಿ ಮಾಡುವ ಇಂತಹ ಕಾರ್ಯ ಪ್ರಶಂಸನೀಯ ಎಂದರು.
ನಾಗಾರಾಧನೆ, ದೈವಾರಾದನೆಯಂತಹ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಿಂದ ದೇವರನ್ನು ಕಂಡವರು ನಾವು. ಇದರ ಜೊತೆಗೆ ಭಜನೆ, ಯಕ್ಷಗಾನದಿಂದಲೂ ದೇವರನ್ನು ಕಾಣುತ್ತೇವೆ. ಅಂದರೆ ನಮ್ಮ ಧರ್ಮದ ಮೇಲೆ ನಾವಿಟ್ಟಿರುವ ಶ್ರದ್ಧೆ, ಭಕ್ತಿಯನ್ನು ನಾವಿಲ್ಲಿ ಗಮನಿಸಬಹುದು. ಒಂದು ದೇವಸ್ಥಾನದ ಪುನರ್ ನಿರ್ಮಾಣದ ಸಂದರ್ಭ ಇಂತಹ ಕಾರ್ಯಕ್ರಮ ಹಮ್ಮಿಕೊಂಡು, ನಮ್ಮ ಭಾವನೆಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿರುವುದು ಉತ್ತಮ ವಿಚಾರ ಎಂದರು.