126 ದಿನಗಳ ಕಾಲ ಪ್ರಯಾಣಿಸಿದ ನಂತರ, ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ವೀಕ್ಷಣಾಲಯವಾದ ಆದಿತ್ಯ-ಎಲ್ 1 ಉಪಗ್ರಹ ಅಂತಿಮವಾಗಿ ಇಂದು ಶನಿವಾರ ಅಪರಾಹ್ನ 4 ಗಂಟೆ ಸುಮಾರಿಗೆ ಅದರ ಗೊತ್ತುಪಡಿಸಿದ ಹಾಲೋ ಕಕ್ಷೆ ಸೇರಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಮೊದಲ ಬಾರಿಗೆ ಲ್ಯಾಗ್ರೇಂಜ್ ಪಾಯಿಂಟ್ 1 ನಲ್ಲಿರುವ ಹಾಲೋ ಕಕ್ಷೆಯಲ್ಲಿ ಉಪಗ್ರಹವನ್ನು ಇರಿಸುವ ನಿರ್ಣಾಯಕ ಕುಶಲತೆ ಕಾರ್ಯವನ್ನು ನಿರ್ವಹಿಸಲಿದ್ದಾರೆ.
ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಸೆ. 2, 2023 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಈ ಕಾರ್ಯಾಚರಣೆಯು ಸುಮಾರು ಮೂರು ವರ್ಷಗಳ ಕಾಲ ತನ್ನ ಕಾರ್ಯನಿರ್ವಹಿಸಲಿದೆ. ಆದಿತ್ಯ-ಎಲ್ 1ನ್ನು ಇಸ್ರೋ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ. ಇದರ ಜೀವಿತಾವಧಿ ಐದು ವರ್ಷಗಳ ಕಾಲ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ವಿಜ್ಞಾನಿಗಳು ಅದನ್ನು ಮೀರಿ ಹೋಗಲೂಬಹುದು ಎಂದು ಅಂದಾಜಿಸಿದ್ದಾರೆ.
ಉಪಗ್ರಹವನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಸೂರ್ಯ-ಭೂಮಿಯ ವ್ಯವಸ್ಥೆಯ ಹಾಲೋ ಕಕ್ಷೆಯಲ್ಲಿ ಇರಿಸಲಾಗುವುದು. ಆದಿತ್ಯ-ಎಲ್1 ಸೂರ್ಯನಿಗೆ ಇರುವ ದೂರದ ಕೇವಲ ಶೇಕಡಾ 1ರಷ್ಟು ಮಾತ್ರ ಕ್ರಮಿಸಬಲ್ಲದು. ಆದಿತ್ಯ-ಎಲ್1 ಸ್ಥಿತಿ ಆರೋಗ್ಯಕರವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಉಪಗ್ರಹವನ್ನು L1 ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸುವುದರಿಂದ ಸೂರ್ಯನನ್ನು ನಿರಂತರವಾಗಿ ವೀಕ್ಷಿಸಬಹುದಾಗಿದೆ.
ಈ ಕಾರ್ಯಾಚರಣೆಯಲ್ಲಿ ಸೌರ ವಾತಾವರಣವನ್ನು ಮುಖ್ಯವಾಗಿ ವರ್ಣಗೋಳ ಮತ್ತು ಕರೋನಾ, ಸೂರ್ಯನ ಹೊರಗಿನ ಪದರಗಳನ್ನು ವೀಕ್ಷಿಸುತ್ತದೆ. ಸ್ಥಳೀಯ ಪರಿಸರವನ್ನು L1 ನಲ್ಲಿ ದಾಖಲಿಸಲು ಹಲವಾರು ಪೇಲೋಡ್‌ಗಳನ್ನು ಬಳಸಲಾಗುತ್ತದೆ.
ಬೋರ್ಡ್‌ನಲ್ಲಿ ಒಟ್ಟು ಏಳು ಪೇಲೋಡ್‌ಗಳಿವೆ. ಅವುಗಳಲ್ಲಿ ನಾಲ್ಕು ಸೂರ್ಯನ ದೂರ ಸಂವೇದಿ ಮತ್ತು ಮೂರು ವೀಕ್ಷಣಾ ಪ್ರಯೋಗಗಳನ್ನು ನಡೆಸುತ್ತವೆ. ಸೂರ್ಯನ ಅಧ್ಯಯನವು ಸೌರ ಚಂಡಮಾರುತಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಸೌರ ಜ್ವಾಲೆಗಳು ಮತ್ತು ಸೌರ ಬಿರುಗಾಳಿಗಳಿಂದ ಭಾರತದ ಉಪಗ್ರಹಗಳು ಮತ್ತು ಸಂವಹನ ಜಾಲಗಳನ್ನು ಅಡ್ಡಿಪಡಿಸದಂತೆ ರಕ್ಷಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಭಾರತವು 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಬಾಹ್ಯಾಕಾಶ ಸಂಪತ್ತನ್ನು ಹೊಂದಿದ್ದು, ಅವುಗಳಲ್ಲಿ 50 ಕಾರ್ಯನಿರ್ವಹಿಸುವ ಉಪಗ್ರಹಗಳು ಕೂಡ ಸೇರಿವೆ.