ಪುತ್ತೂರು: ಸುಳ್ಯದಲ್ಲಿ ಅಡಿಕೆಗೆ ಹಳದಿ ರೋಗಕ್ಕೆ ಮನನೊಂದು ಆಲೆಟ್ಟಿ ಗ್ರಾಮದ ಬಡ್ಡಡ್ಕ ನಿವಾಸಿ ಜಗದೀಶ ಚಳ್ಳಂಗಾರು ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ಸರಕಾರ, ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ನೇರ ಹೊಣೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಮಿನೇಜಸ್ ಆಪಾದಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಷ್ಟೋ ವರ್ಷದ ಮೊದಲೇ ಕಾಣಿಸಿಕೊಂಡ ಅಡಿಕೆ ಹಳದಿ ರೋಗವನ್ನು ನಿಯಂತ್ರಿಸುವಲ್ಲಿ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸುವುದರಲ್ಲಿ ಸರಕಾರ ಸಂಪೂರ್ಣವಾಗಿ ವಿಫಲರಾಗಿದೆ. ಸರಕಾರವು ಈ ಆತ್ಮಹತ್ಯೆಯ ಜವಾಬ್ದಾರಿ ಹೊತ್ತು ಮೃತರ ಕುಟುಂಬಕ್ಕೆ ಕೋಮು ಘರ್ಷಣೆಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ ನೀಡಿದ ಪರಿಹಾರ ಮಾದರಿಯಲ್ಲಿ ಇಪ್ಪತ್ತೈದು ಲಕ್ಷ ರೂಪಾಯಿ ನೀಡಬೇಕಾಗಿ ರೈತ ಸಂಘವು ಒತ್ತಾಯಿಸುತ್ತದೆ. ಅಡಿಕೆ ಹಳದಿ ರೋಗ ಬಂದ ರೈತರಿಗೆ ಪರ್ಯಾಯ ಬೆಳೆ ಬೆಳೆಸಲು ಎಕ್ರೆಗೆ ರೂಪಾಯಿ ಇಪ್ಪತ್ತೈದು ಸಾವಿರವನ್ನು ಕೂಡಲೇ ಬಿಡುಗಡೆಗೊಳಿಸಬೇಕಾಗಿ ಒತ್ತಾಯಿಸಿದರು.
ರಾಜ್ಯ ಸಮಿತಿ ಖಾಯಂ ಆಹ್ವಾನಿತ ಸನ್ನಿ ಡಿಸೋಜಾ ಮಾತನಾಡಿ, ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ರವರು ಬರ ಪರಿಹಾರದ ವಿಚಾರದಲ್ಲಿ ರೈತಕುಲವನ್ನು ಅವಮಾನ ಮಾಡಿರುವ ಹೇಳಿಕೆಯನ್ನು ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಇಂತಹ ಮನಸ್ಥಿತಿವುಳ್ಳ ಸಚಿವರನ್ನು ರೈತರಿಗೆ ಸಂಬಂಧಪಟ್ಟ ಸಕ್ಕರೆ ಇಲಾಖೆಯಿಂದ ವಜಾ ಮಾಡಿ, ರೈತರ ಬಗ್ಗೆ ಕಾಳಜಿ ಹಾಗೂ ಒಳ್ಳೆಯ ಮನಸ್ಥಿತಿ ಇರುವ ಮಂತ್ರಿಗೆ ಒಪ್ಪಿಸಬೇಕಾಗಿ ರೈತ ಸಂಘವು ಒತ್ತಾಯಿಸುತ್ತದೆ ಎಂದರು.
ಕೃಷಿ ಸಾಲಬಾಧೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ. ಬಂಟ್ವಾಳದ ಇಡ್ಕಿದು ಗ್ರಾಮದ ವೀರಪ್ಪ ಗೌಡ ಅವರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಧನವನ್ನು ತೆಗೆಸಿ ಕೊಡಲಾಗಿದೆ. ಆದರೆ ಕೋಮು ಘರ್ಷಣೆಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ ನೀಡಿದ ಪರಿಹಾರ ಮಾದರಿಯಲ್ಲಿ ಇಪ್ಪತ್ತೈದು ಲಕ್ಷ ರೂಪಾಯಿ ನೀಡುವಂತೆ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್, ಸುಳ್ಯ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಪ್ರಧಾನ ಕಾರ್ಯದರ್ಶಿ ಭರತ್ ಉಪಸ್ಥಿತರಿದ್ದರು.