ಶ್ರೀ ಕೃಷ್ಣನಿಗೆ ಗೀತೆ ಅರ್ಪಣೆ ಮಾಡಿದರೆ ಪರಿಪೂರ್ಣ ಅನುಗ್ರಹ ಪಡೆಯಲು ಸಾಧ್ಯ | ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು

ಪುತ್ತೂರು: ಶ್ರೀಕೃಷ್ಣನಿಗೆ ಪ್ರಿಯವಾದ ಗೀತೆಯನ್ನು ಅರ್ಪಣೆ ಮಾಡಿದರೆ ಪರಿಪೂರ್ಣ ಅನುಗ್ರಹ ಪಡೆಯಲು ಸಾಧ್ಯ ಎಂದು ಉಡುಪಿ ಪುತ್ತಿಗೆ ಮಠಾಧೀಶರಾದ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಅವರು ಪರ್ಯಾಯ ಪುತ್ತಿಗೆ ಶ್ರೀ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದರ ಪೌರ ಸನ್ಮಾನ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಗುರುವಾರ ಸಂಜೆ ನಡೆದ ಪೌರ ಸನ್ಮಾನ ಹಾಗೂ ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಷ ದೀಕ್ಷೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಜಗತ್ತಿಗೆ ಕೃಷ್ಣನ ಅನುಗ್ರಹವಾಗುವ ನಿಟ್ಟಿನಲ್ಲಿ ಗೀತಾ ಲೇಖನ ಯಜ್ಞ ಕಾರ್ಯವನ್ನು ಹಾಕಿಕೊಳ್ಳಲಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸುವ ಪೂಜೆಗಳು ಜಗತ್ತಿನ ಒಳಿತಿಗಾಗಿ ನಡೆಯುತ್ತದೆ. ಗೀತೆಯ ಹೆಸರಿನಲ್ಲಿ ಸಮಾಜವನ್ನು ಒಂದಾಗಿಸಿದಾಗ ಸದೃಢವಾಗಿರುತ್ತದೆ ಎಂದು ಅವರು ನುಡಿದರು.



































 
 

ಅವರು ಗುರುವಾರ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಪೌರ ಸನ್ಮಾನ ಹಾಗೂ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಭಗವದ್ಗೀತೆಯ ಪಠಣದಿಂದ ಉತ್ತಮ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಭಗವದ್ಗೀತೆಯನ್ನು ಓದುವ ಹವ್ಯಾಸವನ್ನು ಬೆಳೆಸಬೇಕು. ಮುಂದೆ ಅವರ ಜೀವನ ಉತ್ತಮ ರೀತಿಯಲ್ಲಿ ಸಾಗಲು ಸಾಧ್ಯ. ಜತೆಗೆ ಗೀತೆಯ ಕುರಿತು ಅರಿತುಕೊಂಡಾಗ ಸನಾತನ ಧರ್ಮದ ಜಾಗೃತಿ ಮೂಡಲು ಸಾಧ್ಯ ಎಂದರು.

ವೇದಿಕೆಯಲ್ಲಿ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದರು.

ನಿವೃತ್ತ ಪ್ರಾಂಶುಪಾಲ ಡಾ.ಎಚ್‍.ಮಾಧವ ಭಟ್ ಅಭಿನಂದನಾ ಭಾಷಣ ಮಾಡಿದರು. ಸಮಾರಂಭವನ್ನುದ್ದೇಶಿಸಿ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪೌರ ಸನ್ಮಾನ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ವಹಿಸಿದ್ದರು. ವೇದಿಕೆಯಲ್ಲಿ ಸನ್ಮಾನ ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ ನಿಡ್ವಣ್ಣಾಯ ಉಪಸ್ಥಿತರಿದ್ದರು. ಸನ್ಮಾನ ಸಮಿತಿಯ ಕಾವು ಹೇಮನಾಥ ಶೆಟ್ಟಿ, ಭಾಸ್ಕರ‌ ಬಾರ್ಯ, ಮಹಾಬಲ ರೈ ಒಳತ್ತಡ್ಕ, ಶ್ರೀಧರ ಬೈಪಾಡಿತ್ತಾಯ, ಡಾ.ಭಾಸ್ಕರ್, ದಿವಾಕರ ಗೇರುಕಟ್ಟೆ, ಚಂದ್ರಶೇಖರ ಆಳ್ವ ಪಡುಮಲೆ ಅತಿಥಿಗಳನ್ನು ಗೌರವಿಸಿದರು. ಎ.ಅವಿನಾಶ್ ಕೊಡಂಕಿರಿ ಸನ್ಮಾನ ಪತ್ರ ವಾಚಿಸಿದರು.  ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಉಪಸ್ಥಿತರಿದ್ದರು.

ರೇಣುಕಾ ಕಲ್ಲುರಾಯ ಪ್ರಾರ್ಥನೆ ಹಾಡಿದರು.ಪೌರ ಸನ್ಮಾನ ಸಮಿತಿ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ ಸ್ವಾಗತಿಸಿದರು. ಸಂಚಾಲಕ ರಾಜೇಶ್‍ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಮೊದಲು ಶ್ರೀ ಸ್ವಾಮೀಜಿಗಳು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದರು. ಅಲ್ಲಿಂದ ಮಾತೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಮೀಜಿಯವರನ್ನು ವೇದಿಕೆಗೆ ಕರೆತಂದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top