ಪುತ್ತೂರು: ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ಹಿಂದೊಮ್ಮೆ ಮಾಜಿ ಶಾಸಕರಿಂದ ಗುದ್ದಲಿ ಪೂಜೆ ನಡೆದು ಕಾಮಗಾರಿ ಆರಂಭಗೊಂಡಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಹಾಲಿ ಶಾಸಕರು ಬೇರಿಕೆ-34ನೇ ನೆಕ್ಕಿಲಾಡಿ 10 ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಬ್ಯಾನರ್ ಅಳವಡಿಸುವುದರೊಂದಿಗೆ ಮತ್ತೊಮ್ಮೆ ಗುದ್ದಲಿ ಪೂಜೆ ನಡೆಸುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಬಜತ್ತೂರು ಆರೋಪಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರು-ಉಪ್ಪಿನಂಗಡಿ-ಗುರುವಾಯನಕೆರೆ ಚತುಷ್ಪಥ ರಸ್ತೆಗೆ 2022 ರಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಚಿಂತನೆ ಮೇರೆಗೆ 22 ಕೋಟಿ ಅನುದಾನ ಒದಗಿಸುವಲ್ಲಿ ಶ್ರಮ ವಹಿಸಿದ್ದರು. ಈ ಪೈಕಿ 10 ಕೋಟಿ ರೂ. ಕಾಮಗಾರಿಗೆ ಕಳೆದ 2022 ನೇ ಜನವರಿಯಲ್ಲಿ ಆಡಳಿತ ಮಂಜೂರಾತಿಯೂ ದೊರಕಿತ್ತು. ಇದರಲ್ಲಿ ಸಾರಡ್ಕ-ಪೆರಿಯಡ್ಕ ರಸ್ತೆಗೆ 2.50 ಕೋಟಿ, ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆಗೆ 10 ಕೋಟಿ ಹಾಗೂ ಬೇರಿಕೆ-34ನೇ ನೆಕ್ಕಿಲಾಡಿ ರಸ್ತೆಗೆ 10 ಕೋಟಿ ಅನುದಾನ ಹೀಗೆ 22 ಕೋಟಿ ಅನುದಾನವನ್ನು ಸಂಜೀವ ಮಠಂದೂರು ಅವರು ತಂದುಕೊಟ್ಟಿದ್ದರು. ಬೇರಿಕೆ-34 ನೆಕ್ಕಿಲಾಡಿ ರಸ್ತೆಯನ್ನು 18 ತಿಂಗಳಲ್ಲಿ ಮುಗಿಸಬೇಕಿತ್ತು. ಅಷ್ಟರಲ್ಲೇ ಅವರ ಅವಧಿ ಮುಗಿದಿದೆ.
ಇದೀಗ ಹಾಲಿ ಶಾಸಕ ಅಶೋಕ್ ಕುಮಾರ್ ರೈ ಬ್ಯಾನರ್ ಅಳವಡಿಸುವ ಮೂಲಕ ಬೇರಿಕೆ-34 ನೆಕ್ಕಿಲಾಡಿ ರಸ್ತೆಗೆ ನಾನೇ ಅನುದಾನ ತಂದಿದ್ದೇನೆ ಎಂದು ಹೇಳಿ ಮತ್ತೊಮ್ಮೆ ಗುದ್ದಲಿ ಪೂಜೆ ನಡೆಸಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಬೆಳಿಯೂರುಕಟ್ಟೆ ಡ್ಯಾಮ್‍ನಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಗಂಗಾ ಪೂಜೆ ನಡೆಸಿದಾಗ ಹಾಲಿ ಶಾಸಕರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡ್ಯಾಮ್ ನಿರ್ಮಾಣ ಮಾಡುವ ಮೂಲಕ ಸ್ಥಳೀಯ ಹಾಗೂ ಬೆಳ್ತಂಗಡಿ ಭಾಗದ ಬಹುತೇಕ ಪ್ರದೇಶಗಳ ಕೃಷಿಗೆ ನೀರುಣಿಸುವ ಕೆಲಸ ಮಾಡಲಾಗಿದೆ. ಬಹು ವರ್ಷದ ಕನಸು ನನಸಾಗುವ ಹೊತ್ತಿನಲ್ಲಿ ಸ್ಥಳೀಯರ ಖುಷಿ ಹಾಗೂ ಆಹ್ವಾನದ ಮೇರೆಗೆ ಗಂಗಾ ಪೂಜೆಯಲ್ಲಿ ಪಾಲ್ಗೊಂಡಿದ್ದೇನೆ ಹೊರತು ಅದು ಸರಕಾರಿ ಹಾಗೂ ಅಧಿಕೃತ ಕಾರ್ಯಕ್ರಮ ಅಲ್ಲ ಎಂದು ಸಂಜೀವ ಮಠಂದೂರು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸುರೇಶ್ ಅತ್ರಮಜಲು, ಬಾಲಚಂದ್ರ ಪೂಜಾರಿ, ಸ್ಮಿತಾ, ಹರೀಶ್ ಡಿ. ಉಪಸ್ಥಿತರಿದ್ದರು.