ಹಲವು ಬಾರಿ ಮನವಿ ಮಾಡಿದರೂ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯನ್ನು ಬಿಜೆಪಿ ಟೀಕಿಸಿದೆ.
ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿರುವ ರಾಜ್ಯ ಬಿಜೆಪಿ ಘಟಕ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ.
39 ಸೆಕೆಂಡುಗಳ ಈ ವಿಡಿಯೋದಲ್ಲಿ, ಸಿಎಂ ಸಿದ್ದರಾಮಯ್ಯ ಅವರು ದೇವಾಲಯದ ಪ್ರವೇಶ ದ್ವಾರದ ಬಳಿ ನಿಂತಿರುವುದನ್ನು ಕಾಣಬಹುದು. ಅಲ್ಲಿಂದ ಅವರನ್ನು ಗರ್ಭಗುಡಿಗೆ ಬರುವಂತೆ ಮನವಿ ಮಾಡಿದರೂ, ಅವರು ಪ್ರವೇಶಿಸಲು ನಿರಾಕರಿಸುತ್ತಾರೆ. ಅವರ ಬದಲಿಗೆ ಸಚಿವ ಎಂ.ಬಿ. ಪಾಟೀಲ ಅವರನ್ನು ದೇವಸ್ಥಾನದ ಒಳಗೆ ಕಳುಹಿಸುತ್ತಾರೆ. ಒಳಗೆ ಬಂದ ಪಾಟೀಲ ಅವರು ಸಹ ಸಿಎಂಗೆ ಮನವಿ ಮಾಡಿದರೂ, ಅವರು ಒಳಗೆ ಬರಲು ನಿರಾಕರಿಸುತ್ತಾರೆ. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ನೀಡಿ, ರಾಮಮಂದಿರಕ್ಕೆ ದೇಣಿಗೆ ನೀಡದ ಸಿಎಂ ಸಿದ್ದರಾಮಯ್ಯರವರ ಅಸಲಿ ಮುಖ ಇದು ಎಂದು ಬಿಜೆಪಿ ದೂರಿದೆ.
ಸಿಎಂ ಸಿದ್ದರಾಮಯ್ಯನವರೇ, ಮಸೀದಿ, ದರ್ಗಾಗಳಿಗೆ ಹೋಗಿ ಅವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಂಡು ಫೋಸು ಕೊಡುವ ನಿಮಗೆ, ದೇವಿಯ ಬಳಿ ನಾಡಿನ ಒಳಿತಿಗಾಗಿ ಭಕ್ತಿಯಿಂದ ಕೈ ಮುಗಿಯುವಷ್ಟು ಸಮಯವಿಲ್ಲ. ಹಿಂದೂ ಧರ್ಮ, ಹಿಂದೂ ದೈವ ಹಾಗೂ ಹಿಂದೂಗಳನ್ನು ಕಂಡರೆ ಈ ಪರಿ ಅಸಡ್ಡೆ ಏಕೆ..? ಎಂದು ಬಿಜೆಪಿ ಪ್ರಶ್ನಿಸಿದೆ.
ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ಭೇದ ಮರೆತು ಭಾರತೀಯರೆಲ್ಲರೂ ಒಟ್ಟಾಗಿ ರಾಮಮಂದಿರ ನಿರ್ಮಾಣವನ್ನು ಸಂಭ್ರಮಿಸುತ್ತಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಸಹಿಸಲಾಗುತ್ತಿಲ್ಲ. ಸದಾ ಕೋಮುದ್ವೇಷ ಹಬ್ಬಿಸಿ ಅದರಿಂದ ಲಾಭ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಈಗ ಹಸಿದಿದೆ. ತನ್ನ ಹಸಿವು ನೀಗಿಸಲು ಸಮಾಜದ ಶಾಂತಿಯನ್ನೇ ಭಕ್ಷಿಸಲು ತಯಾರಾಗಿದೆ ಎಂದು ದೂರಿದೆ.